ಕೂಡ್ಲಿಗಿಯ ಕ್ಯಾಸನಕೇರಿಯಲ್ಲಿ ಉಚಿತ ಆಫೀಸ್ ಮ್ಯಾನೇಜ್ಮೆಂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಸ್ನೇಹ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಉದ್ಘಾಟಿಸಿದರು 
ಜಿಲ್ಲೆ

ವೃತ್ತಿ ತರಬೇತಿ ಉದ್ಯೋಗಾವಕಾಶಗಳ ರಹದಾರಿ- ಸ್ನೇಹ ಸಂಸ್ಥೆಯ ನಿರ್ದೇಶಕ ಟಿ. ರಾಮಂಜನೇಯ ಅಭಿಮತ

ಕೂಡ್ಲಿಗಿ: ವೃತ್ತಿ ತರಬೇತಿ ಉದ್ಯೋಗಾವಕಾಶಗಳ ರಹದಾರಿ ಎಂದು ಸ್ನೇಹ ಸಂಸ್ಥೆಯ ನಿರ್ದೇಶಕ ಟಿ. ರಾಮಂಜನೇಯ ಹೇಳಿದರು. ತಾಲೂಕಿನ ಕ್ಯಾಸನಕೇರಿಯಲ್ಲಿ ಸ್ನೇಹ ಸಂಸ್ಥೆಯು ಥಾಟ್ ವರ್ಕ್ ಇಂಡಿಯಾ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 6 ತಿಂಗಳ ಉಚಿತ ಆಫೀಸ್ ಮ್ಯಾನೇಜ್ಮೆಂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.

ದಲಿತ ಮತ್ತು ದಮನಿತ ಯುವತಿಯರು ಉಚಿತ ಕಂಪ್ಯೂಟರ್ ತರಬೇತಿ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮದಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವಲ್ಲಿ ಅನೇಕರ ಶ್ರಮವಿದೆ. ಸಂಸ್ಥೆ 2012ರಿಂದಲೂ ತರಬೇತಿ ಕೇಂದ್ರಗಳನ್ನು ಆಯೋಜನೆ ಮಾಡಿಕೊಡು ಬಂದಿದೆ. ತರಬೇತಿ ಪಡೆದು ಶೇ.75 ಹೆಣ್ಣು ಮಕ್ಕಳು ಸ್ವ ಉದ್ಯೋಗದೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಮತ್ತು ಈಗಾಗಲೇ ತರಬೇತಿ ಪಡೆದು 254 ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಟಿ.ಜಗದೀಶ್, ಸ್ನೇಹ ಸಂಸ್ಥೆ ಕಳೆದ 30 ವರ್ಷಗಳಿಂದ ಜನರ ಬದಲಾವಣೆಗೆ ಶ್ರಮಿಸುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಸಂಸ್ಥೆಯ ಯೋಜನೆಗಳು ಪೂರಕವಾಗಿವೆ. ಕೋವಿಡ್ ಸಮಯದಲ್ಲಿ ತಾಲೂಕಿನ ಅನೇಕ ಹಳ್ಳಿಗಳ ದಮನಿತ ಮಹಿಳೆಯರಿಗೆ ಪಡಿತರ ಕಿಟ್ ನೀಡಿ ಧನ್ಯತೆ ಮೆರೆದಿದೆ. ಜತೆಗೆ ಆಶಾ-ಅಂಗನವಾಡಿ ಕಾರ್ಯಕರ್ತರು, ಸ್ಟಾೃಪ್‌ನರ್ಸ್ ಹಾಗೂ ಶಾಲೆಗಳಿಗೆ ಕೋವಿಡ್ ಸುರಕ್ಷಾ ಕಿಟ್ ಸಹ ನೀಡಿದೆ. ಇದೀಗ ಉಚಿತ ಕಂಪ್ಯೂಟರ್ ತರಬೇತಿಗೆ ಮುಂದಾಗಿರುವುದು ಶ್ಲಾಘನಾರ್ಹ ಎಂದರು. ತಾಪಂ ಇಒ ವೈ.ರವಿಕುಮಾರ್, ಸಿಬ್ಬಂದಿ ಗೀತಾ, ಶೈಲಜಾ, ಮಹಾದೇವಿ, ಅಸ್ಲಂಬಾಷಾ ಇತರರಿದ್ದರು.