ಕೂಡ್ಲಿಗಿ: ಮುಸ್ಲಿಂ ಮೀಸಲಾತಿಗಾಗಿ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಸಂವಿಧಾನದ ಆಶಯಕ್ಕೆ ಮಾಡಿದ ಅಪಮಾನ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಮಂಡಲ ಬಿಜೆಪಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಈಗಾಗಲೇ ಅನೇಕ ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಸಚಿವ ಅನಂತ್‌ಕುಮಾರ್ ಹೆಗಡೆ ಅವರ ಹೇಳಿಕೆಗಳನ್ನು ತಿರುಚಿ ದೇಶದಲ್ಲಿ ಗುಲ್ಲೆಬ್ಬಿಸಿದ ಕಾಂಗ್ರೆಸ್, ಇದೀಗ ಡಿ.ಕೆ.ಶಿವಕುಮಾರ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಅವರನ್ನು ಮೊದಲಿನಿಂದಲೂ ಅಪಮಾನ ಮಾಡುತ್ತ ಬಂದಿರುವ ಕಾಂಗ್ರೆಸ್, ಚುನಾವಣೆಯಲ್ಲಿ ಸೋಲಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಅಂಬೇಡ್ಕರ್ ಮರಣ ಹೊಂದಿದಾಗ ಅಂತ್ಯಸಂಸ್ಕಾರ ಮಾಡಲು ಜಾಗ ನೀಡದ ಕಾಂಗ್ರೆಸ್ ಅವರ ಹೆಸರನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಮದಕರಿ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷೆ ದೀನಾ ಮಂಜುನಾಥ, ಮಂಡಲ ಅಧ್ಯಕ್ಷ ಕೆ. ನಾಗರಾಜ, ಪ್ರಮುಖರಾದ ಸೂರ್ಯ ಪಾಪಣ್ಣ, ಎಸ್. ದುರುಗೇಶ್, ಪಪಂ ಸದಸ್ಯ ಕೆಎಚ್‌ಎಂ ಸಚಿನ್‌ಕುಮಾರ್, ಮಂಡಲ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಸಿದ್ದೇಶ, ಲಕ್ಷ್ಮೀಬಾಯಿ, ರತ್ನಮ್ಮ, ಎ.ಎಂ.ವಾಗೀಶ್‌ಮೂರ್ತಿ, ಸುಧಾಕರ, ಪವಿತ್ರಾ, ರಾಜಣ್ಣ, ಶಿಲ್ಪಾ, ಶಾರದಾ ಕುಂಬಾರ, ಭರತ್, ಉಗ್ರಂ ಕಿಟ್ಟಿ, ರಾಘವೇಂದ್ರ, ಸೊಲ್ಲೇಶ್ ಇದ್ದರು.