ಕೂಡ್ಲಿಗಿಯಲ್ಲಿ ವೀರಶೈವ ಪ್ರಮುಖರ ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿದರು. ವೀರಶೈವ ಸಮುದಾಯದ ಪ್ರಮುಖರಾದ ಎಂ.ಗುರುಸಿದ್ದನ ಗೌಡ, ಜಿ.ಉಮೇಶ್, ಸುನೀಲ್ ಗೌಡ, ಕಾಶೀನಾಥಯ್ಯ ಇದ್ದರು. 
ಜಿಲ್ಲೆ

ಒಗ್ಗಟ್ಟಿನಿಂದ ಸೌಕರ್ಯ ಪಡೆಯಲು ಸಾಧ್ಯ

ಕೂಡ್ಲಿಗಿ: ವೀರಶೈವ ಉಪಪಂಗಡಗಳು ಏಕತೆ ಪ್ರದರ್ಶಿಸುವ ಮೂಲಕ ಸಮಾಜ ಸಂಘಟನೆಗೆ ಒತ್ತು ನೀಡಬೇಕು ಎಂದು ವೀರಶೈವ ಸಮುದಾಯದ ಪ್ರಮುಖ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ವೀರಶೈವ ಪ್ರಮುಖರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ವೀರಶೈವ ಸಮಾಜ ತೀರ ಹಿಂದುಳಿದಿದೆ. ಆದರೆ ರಾಜಕೀಯ ಷಡ್ಯಂತ್ರದಿಂದ ಸಮುದಾಯವನ್ನು ಉಪ ಪಂಗಡಗಳಾಗಿ ಒಡೆದಿರುವುದು ವಿಪರ್ಯಾಸ. ಇದರಿಂದಾಗಿ ವೀರಶೈವ ಸಮಾಜ ಅಧಃಪತನವಾಗಿದೆ. ಎಲ್ಲ ಉಪಪಂಗಡಗಳು ಒಟ್ಟಾಗಿದ್ದರೆ ಸರ್ಕಾರ ಕಿವಿಗೊಡುತ್ತದೆ. ಇಲ್ಲವಾದಲ್ಲಿ ನಾವು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಷ್ಟ ಎಂದರು.

ಪಟ್ಟಣದಲ್ಲಿ ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭಾ ಮೂಲಕ ಸಂಘಟನೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪಪ್ಪಿ ಲೇ ಔಟ್‌ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಿದ್ದು, ಶೀಘ್ರ ನೋಂದಣಿ ಮಾಡಿಸಿ, ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮಾಡಬೇಕಿದೆ. ತಾಲೂಕಿನ ಎಲ್ಲ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಆರ್ಥಿಕವಾಗಿ ಸಹಕಾರ ನೀಡಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಬೇಕು. ಜತೆಗೆ ಸಮಾಜದ ಸಂಘಟನೆಯ ಶಕ್ತಿ ಪ್ರದರ್ಶನ ಕೂಡ ಮಾಡಬೇಕಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಉಪ ಪಂಗಡಗಳ ಪ್ರಮುಖರು ಒಟ್ಟಾಗಿ ವೀರಶೈವ ಲಿಂಗಾಯತ ಮುಖಂಡರ ಮನೆಗೆ ತೆರಳಿ ಮನವೊಲಿಸುವ ಮೂಲಕ ಸಮಾಜದ ಸಂಘಟನೆಗೆ ಮುಂದಾಗಬೇಕು ಎಂದು ಗುಂಡುಮುಣುಗು ತಿಪ್ಪೇಸ್ವಾಮಿ ತಿಳಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಅವರು ಒಂದು ಲಕ್ಷ ರೂ. ಹಾಗೂ ಇತರ ಅನೇಕರು ದೇಣಿಗೆ ನೀಡಿದರು. ಎಂ.ಬಿ.ಅಯ್ಯನಹಳ್ಳಿ ವೀರಶೈವ ಮುಖಂಡ ಹೊಸಮನೆ ಚಿದಾನಂದಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೀರಶೈವ ಸಮುದಾಯದ ಪ್ರಮುಖರಾದ ಎಂ.ಗುರುಸಿದ್ದನಗೌಡ, ಜಿ.ಉಮೇಶ್, ಸುನೀಲ್ ಗೌಡ, ಕಾಶೀನಾಥಯ್ಯ, ಜಿ.ಎಸ್.ಗಿರೀಶ್, ರಾಮದುರ್ಗ ಮರುಳಸಿದ್ದಪ್ಪ, ಟಿ.ಜಿ.ನಾಗರಾಜ ಗೌಡ, ಹೊಂಬಾಳೆ ರೇವಣ್ಣ, ಎಂ.ಶಿವಣ್ಣ, ಹಾರಕಬಾವಿ ಕೊಟ್ರೇಶ್, ಬಣವಿಕಲ್ಲು ಎರಿಸ್ವಾಮಿ, ವೀರಣ್ಣ, ಅಜ್ಜನಗೌಡ ಎಂ.ಬಿ.ಅಯ್ಯನಹಳ್ಳಿ, ಸಂಗಣ್ಣ, ಪಿ.ಶಿವರಾಜ, ಕಾಮಶೆಟ್ಟಿ ನಾಗರಾಜ, ಕೆ.ಎಸ್.ವೀರೇಶ್, ನಂದಿ ಬಸವರಾಜ, ಲಕ್ಷ್ಮೀದೇವಿ, ಅಕ್ಕಮಹಾದೇವಿ, ಆಲೂರು ಮಲ್ಲಿಕಾರ್ಜುನ, ಪಿ.ಪ್ರಶಾಂತ, ವಿಭೂತಿ ವೀರಣ್ಣ, ಸೋಗಿ ಗುರುಸಿದ್ದಪ್ಪ, ಜೆ.ಬಸವರಾಜ, ನಾಗೇಶ್ ಮಂಗಾಪುರ, ಬಣಕಾರ ಮೂಗಣ್ಣ ಇದ್ದರು.