ಜಿಲ್ಲೆ

ಕೂಡ್ಲಹಳ್ಳಿ ಸಂಗಮೇಶ್ವರ ತೇರು ವೈಭವ

Davangere - Desk - Mahesh Babu E

ಹಿರಿಯೂರು: ತಾಲೂಕಿನ ಕೂಡ್ಲಹಳ್ಳಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು.

ಹಸಿರುತೋರಣ, ಬಣ್ಣದ ಬಟ್ಟೆ ಹಾಗೂ ಹೂ ಮಾಲೆಗಳಿಂದ ಅಲಂಕರಿಸಿದ ರಥದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿ ಕರೆತಂದು ಪ್ರತಿಷ್ಠಾಪಿಸಲಾಯಿತು. ಕಳಸ ಪೂಜೆ, ಹಿಡುಗಾಯಿ, ಬಲಿ ಅನ್ನ, ಕುಂಬಳ ಕಾಯಿ ಹೊಡೆದು, ಮಹಾಮಂಗಳಾರತಿ ಇತರ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು.

ಮಧ್ಯಾಹ್ನ 2ಕ್ಕೆ ತೇರನ್ನು ದೇವಸ್ಥಾನದ ಆವರಣದಿಂದ ಊರಬಾಗಿಲವರೆಗೆ ಎಳೆಯಲಾಯಿತು. ಭಕ್ತರು ರಥದ ಕಳಸಕ್ಕೆ ಬಾಳೆ ಹಣ್ಣು, ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸಿದರು. ಬಳಿಕ ರಥವನ್ನು ಭಕ್ತಾಧಿಗಳು ಮೂಲ ಸ್ಥಾನಕ್ಕೆ ಎಳೆದು ತಂದರು.

ಜಾತ್ರೋತ್ಸವ ಅಂಗವಾಗಿ ಧ್ವಜರೋಹಣ, ಅಗ್ನಿ, ಹೋಮಾದಿ ಹನ್ಮಂತ ಮಹೋತ್ಸವ, ಗರುಡೋತ್ಸವ. ಗಜೇಂದ್ರಮೋಕ್ಷ. ಧೂಳೋತ್ಸವ, ವಸಂತೋತ್ಸವ, ಧ್ವಜಾ ಅವರೋಹಣ, ಕಂಕಣ ವಿಸರ್ಜನೆ, ಪೂರ್ಣಾಹುತಿ 101 ಮಂಗಳಾರತಿ, ಶಯನೋತ್ಸವ ಇತರ ಧಾರ್ಮಿಕ ಕಾರ್ಯ ನೆರವೇರಿದವು.

ಜಿಲ್ಲೆ ಮತ್ತು ಆಂಧ್ರಪ್ರದೇಶದಿಂದ ಸಹಸ್ರರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.