ಜಿಲ್ಲೆ

ಇತಿಹಾಸದಲ್ಲಿ ಕುಬೇರ ಕುಡಿಕೆ ಬೇವೂರು

ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ

ಒಂದಾನೊಂದು ಕಾಲದಲ್ಲಿ ಇದು ಜೈನರ ಕೇಂದ್ರ. ಧಾರ್ಮಿಕ ಕೇಂದ್ರಗಳ ತವರೂರು.., ಗುರುಪರಂಪರೆಯ ನೆಲೆವೀಡು.., ಅದುವೇ ಚನ್ನಪಟ್ಟಣ ತಾಲೂಕಿನ ಬೇವೂರು.

ಹೌದು...! ಬೊಂಬೆಗಳ ನಾಡು ಎಂದೇ ವಿಶ್ವಖ್ಯಾತಿ ಗಳಿಸಿರುವ ಚನ್ನಪಟ್ಟಣದ ಬಹುತೇಕ ಗ್ರಾಮಗಳು ತಮ್ಮದೇ ಇತಿಹಾಸ ಹೊಂದಿವೆ. ಅವುಗಳಲ್ಲಿ ಬೇವೂರು ಅಗ್ರಸ್ಥಾನದಲ್ಲಿದೆ. ವಿಸ್ತಾರದಲ್ಲಿ ದೊಡ್ಡದಾಗಿರುವಂತೆ ಇತಿಹಾಸವೂ ವಿಶಾಲವಾಗಿದೆ. ಗತಕಾಲದಿಂದಲೂ ಕುಶಲತೆಯುಳ್ಳ ಕುಂಬಾರಿಕೆಯು ಗ್ರಾಮದಲ್ಲಿ ಇನ್ನೂ ಜೀವಂತವಾಗಿದೆ. ಅದೇ ಕಾರಣಕ್ಕೆ ಗ್ರಾಮವನ್ನು ಕುಡಿಕೆ ಬೇವೂರು ಎಂಥಲೂ ಕರೆಯುತ್ತಾರೆ.

1500 ಸಾವಿರ ವರ್ಷಗಳ ಇತಿಹಾಸ

ಈ ಗ್ರಾಮಕ್ಕೆ ಸುಮಾರು 1500 ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸವಿದ್ದು, ಆಗ ಜೈನರ ಕೇಂದ್ರವಾಗಿತ್ತು ಎನ್ನಲಾಗಿದೆ. ಇದಕ್ಕೆ ಇಂಬು ಕೊಡುವಂತೆ ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳೂ ಲಭ್ಯವಾಗಿವೆ. ನಿಂಬೆಯೂರು, ನಿಂಬೂ ಗ್ರಾಮ ಎಂಬ ಹೆಸರಿನಿಂದ ಕರೆಯುಲ್ಪಡುತ್ತಿದ್ದ ಬೇವೂರಿನಲ್ಲಿ ಸದ್ಯ 4.5 ಸಾವಿರಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ, ಪದವಿ ಪೂರ್ವ ಕಾಲೇಜು ಇದ್ದು, ನಿರೀಕ್ಷಿತವಾದ ಅಭಿವೃದ್ಧಿಯಾಗಿಲ್ಲ. ಆದರೂ ಪುರಾತನ ಧಾರ್ಮಿಕ ನೆಲೆಗಟ್ಟಿನಲ್ಲಿ ತನ್ನದೇ ಅತಿಥಿಗಳನ್ನು ಗ್ರಾಮ ಸ್ವಾಗತಿಸುತ್ತಿದೆ ಎನ್ನುತ್ತಾರೆ ಗ್ರಾಮದ ಬಿ.ಸಿ.ಗುರುಕುಮಾರ್, ಕನ್ನಡಪರ ಹೋರಾಟಗಾರ ಬೇವೂರು ಯೋಗೀಶ್, ಜಾನಪದ ಗಾಯಕ ಬೇವೂರು ರಾಮಯ್ಯ. ಉಡಸಲಮ್ಮ ದೇವಸ್ಥಾನಕ್ಕೆ ಬಾಗಿಲೇ ಇಲ್ಲ !

ಗ್ರಾಮಕ್ಕೆ ಕಾಲಿಡುತ್ತಲ್ಲೇ ಸಿಗುವ ಆದಿ ಉಡಸಲಮ್ಮ, ಬೆಟ್ಟದ ತಿಮ್ಮಪ್ಪ, ಸಿದ್ದರಾಮೇಶ್ವರ, ಕಣಿವೆ ಆಂಜನೇಯ, ಅರ್ಕೇಶ್ವರಸ್ವಾಮಿ, ಚೌಡೇಶ್ವರಿ, ಬೀರೇಶ್ವರ ಹೀಗೆ 20ಕ್ಕೂ ಹೆಚ್ಚು ಐತಿಹಾಸಿಕ ದೇವಸ್ಥಾನಗಳು ಗ್ರಾಮದಲ್ಲಿವೆ. ಶ್ರೀ ಆದಿ ಉಡಸಲಮ್ಮನ ದೇವಸ್ಥಾನಕ್ಕೆ ಬಾಗಿಲು ಇಲ್ಲದಿರುವುದೇ ಇಲ್ಲಿನ ವಿಶೇಷ. ಒಮ್ಮೆ ಈ ದೇವಾಲಯಕ್ಕೆ ಬಾಗಿಲು ಜೋಡಿಸಿದರಂತೆ. ಆದರ ಮಾರನೆಯ ದಿನವೇ, ಆ ಬಾಗಿಲು ಸುಮಾರು 50 ಅಡಿ ದೂರ ಹೋಗಿ ಬಿದ್ದಿತ್ತಂತೆ.

ಆ ಬಾಗಿಲು ಬಿದ್ದಿದ್ದ ಸ್ಥಳದಲ್ಲಿ ಒಂದು ಕಲ್ಲನ್ನು ಸ್ಥಾಪಿಸಿದ್ದಾರೆ. ಮತ್ತೆ ಬಾಗಿಲು ಅಳವಡಿಸಿಲ್ಲ. ದೇವಾಲಯಕ್ಕೆ ಅರ್ಚಕರೂ ಇಲ್ಲ. ಆರೇಳು ವರ್ಷಗಳಿಗೊಮ್ಮೆ, ಕೊಂಡ-ಬಂಡಿ ಉತ್ಸವ ನಡೆಯುತ್ತದೆ. ಮದುವೆಯಂಥ ಶುಭಕಾರ್ಯಗಳ ಸಂದರ್ಭಗಳಲ್ಲಿ ವಧುವಿನ ಆಭರಣಗಳನ್ನಿಟ್ಟು ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಮಂಗಳವಾರ ಮತ್ತು ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚು. ದೇವಿಗೆ ಹರಕೆ ಹೊತ್ತರೆ, ಆ ಕಾರ್ಯ ಸಿದ್ಧಿಸುವುದು ಖಚಿತ ಎಂಬುದು ಇಲ್ಲಿನವರ ನಂಬಿಕೆ ಎನ್ನುತ್ತಾರೆ ಜಾನಪದ ಸಂಶೋಧಕ ವಿಜಯ್ ರಾಂಪುರ.

ಇನ್ನು ಗ್ರಾಮದ ಅರ್ಕೇಶ್ವರ ದೇವಸ್ಥಾನ ಗಂಗರ ಕಾಲದ್ದು ಎನ್ನಲಾಗುತ್ತದೆ. ಪಾದಬಂಧ ಅನುಷ್ಠಾನ ಹೊಂದಿರುವ ಈ ದೇವಸ್ಥಾನದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗಗಳಿವೆ. ಗಂಗರ ಇಮ್ಮಡಿ ಭೂತುಗನ ಸೇನಾಧಿಪತಿಯಾಗಿದ್ದ ಮೃಣಾಲರನು ಊರಿನ ಕೆರೆಯ ತೂಬನ್ನು ಜೀರ್ಣೋದ್ಧಾರ ಮಾಡಿಸಿ, ಇಲ್ಲಿಯೇ ದೇವಾಲಯವೊಂದನ್ನು ಕಟ್ಟಿಸಿದನು ಎನ್ನಲಾಗಿದೆ. ಇತ್ತೀಚಿಗೆ ಮರುಜೀರ್ಣೋದ್ಧಾರ ನಡೆಸಲಾಗಿದೆ.

ಕುಂಬಾರಿಕೆಯ ತವರೂರು!

ಬೇವೂರು ಮಣ್ಣಿನ ಮಡಿಕೆ-ಕುಡಿಕೆಗಳಿಗೆ ಪ್ರಸಿದ್ಧಿಯಾಗಿದೆ. ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುಡಿಕೆಗಳನ್ನು ತಯಾರಿಸುತ್ತಿದ್ದ ಕಾರಣ ಹಾಗೂ ಮಣ್ಣಿನ ದೀಪ, ಹೆಜ್ಸೊಡರು, ಮಣ್ಣಿನ ಗಂಟೆ ಇತ್ಯಾದಿಗಳನ್ನು ತಯಾರಿಸುತ್ತಿದ್ದ ಹಿನ್ನೆಲೆಯಲ್ಲಿ ಕುಡಿಕೆ ಬೇವೂರು ಎಂದೂ ಕರೆಯಲಾಗುತ್ತದೆ. ಇಲ್ಲಿ ಮಾಡುವ ಮಣ್ಣಿನ ಕುಡಿಕೆಗಳಿಗೆ ರಾಜ್ಯವಲ್ಲದೆ ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. 50ಕ್ಕೂ ಹೆಚ್ಚು ಕುಂಬಾರ ಕುಟುಂಬಗಳಿದ್ದು, ಈ ಪೈಕಿ 40ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯನ್ನೇ ಅವಲಂಬಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನೀಕರಣ ಹಾಗೂ ಚೀನಾ ವಸ್ತುಗಳು ಮಾರುಕಟ್ಟೆ ಪ್ರವೇಶದಿಂದ ನಿರೀಕ್ಷಿತ ಲಾಭ ದೊರುಕುತ್ತಿಲ್ಲ. ಆದರೂ, ನಮ್ಮ ಮೂಲವೃತ್ತಿ ಬಿಡಬಾರದು ಎಂಬ ಉದ್ದೇಶದಿಂದ ಕುಂಬಾರಿಕೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಕುಂಬಾರ ಸಮುದಾಯದ ಶ್ರೀನಿವಾಸ್.

ತಿಮ್ಮಪ್ಪನ ಕಥೆ ಬಲು ರೋಚಕ !

ಗ್ರಾಮದಲ್ಲಿ ಶೈವ ಪಂಥದ ಶ್ರೀ ಸಿದ್ದರಾಮೇಶ್ವರ ಬೆಟ್ಟ ಹಾಗೂ ವೈಷ್ಣವ ಪಂಥದ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟ ಇರುವುದು ಮತ್ತೊಂದು ವಿಶೇಷ. ಈ ಎರಡು ಅವಳಿ ಬೆಟ್ಟಗಳು ಅಪಾರ ಪ್ರಾಕೃತಿಕ ಸೊಬಗನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಈ ಬೆಟ್ಟಗಳಲ್ಲಿ ನೆಲೆಸಿರುವ ದೇವರುಗಳ ಬಗ್ಗೆ ರೋಚಕ ಜಾನಪದ ಕತೆಗಳೂ ಇವೆ. ಅದರಲ್ಲಿ ಬೆಟ್ಟದ ತಿಮ್ಮಪ್ಪ ನೆಲೆಗೊಂಡ ಕಥೆ ಸಾಕಷ್ಟು ಸ್ವಾರಸ್ಯಕರವಾಗಿದ್ದು, ಬೆಟ್ಟದ ತಿಮ್ಮಪ್ಪ ಮತ್ತು ಸಿದ್ದರಾಮೇಶ್ವರ ಇಬ್ಬರೂ ಅಣ್ಣತಮ್ಮಂದಿರು.

ತಿಮ್ಮಪ್ಪ ಮೊದಲು ಅಣ್ಣನ ದೇವಾಲಯದಲ್ಲಿಯೇ ನೆಲೆಯಾಗಿರುತ್ತಾನೆ. ಒಂದು ದಿನ ಸಿದ್ದರಾಮೇಶ್ವರಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದ ಬೇವೂರು ಮಠದ ಮೂಲಪುರುಷ ಜಡೇ ಮಹತಾ ಒಡೆಯರ್‌ಗೆ ಬೆಟ್ಟದ ತಿಮ್ಮಪ್ಪನು ಅಶರೀರವಾಣಿ ಮೂಲಕ ನನ್ನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗು ಎಂದು ಒತ್ತಾಯಿಸಿದರಂತೆ. ನಿನ್ನನ್ನು ಕರೆದುಕೊಂಡು ಹೋಗಲು ನನ್ನ ಕೈಯಲ್ಲಿ ಹೇಗೆ ಸಾಧ್ಯ ಎಂದು ಒಡೆಯರ್ ನುಡಿದಾಗ, ನನ್ನನ್ನು ಹೂವಿನ ಕುಕ್ಕೆಯಲ್ಲಿ ಇಟ್ಟುಕೊಂಡು ಪಕ್ಕದ ಗುಡ್ಡೆಗೆ ಕರೆದುಕೊಂಡು ಹೋಗು. ನಿನಗೆ ನಾನು ಎಲ್ಲಿ ಭಾರವಾಗುತ್ತೇನೋ ಅಲ್ಲಿ ನನ್ನನ್ನು ಇಟ್ಟು ಬಂದುಬಿಡು ಎಂದು ಕೇಳಿಕೊಂಡನಂತೆ.

ಅದರಂತೆ ಸಿದ್ದರಾಮೇಶ್ವರ ಬೆಟ್ಟದ ಪಕ್ಕದ ಇನ್ನೊಂದು ಬೆಟ್ಟದಲ್ಲಿ ತಿಮ್ಮಪ್ಪ ನೆಲೆಯಾದ ಎಂಬ ಮಾತಿದೆ. ಮತ್ತೊಂದು ಕತೆ ಪ್ರಕಾರ, ಸಿದ್ದರಾಮೇಶ್ವರನೇ ತಮ್ಮನನ್ನು ಇಲ್ಲಿ ನೆಲೆ ಮಾಡಿದ ಎಂಬ ಮಾತು ಸಹ ಗ್ರಾಮದ ಹಿರಿಯರ ಬಾಯಲ್ಲಿದೆ. ಸಿದ್ದರಾಮೇಶ್ವರ ಮತ್ತು ತಿಮ್ಮಪ್ಪ ಒಂದೊಂದು ಬೆಟ್ಟದಲ್ಲಿ ನೆಲೆಯಾಗಿದ್ದು, ಈ ಎರಡು ಬೆಟ್ಟಗಳು ರಮಣೀಯವಾಗಿವೆ. ಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ.

ಗ್ರಾಮದ ಅಭಿವೃದ್ಧಿಗೆ ಮಠದ ಕೊಡುಗೆ!

ಇನ್ನು ಈ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಶಾಂತ ಮಲ್ಲಿಕಾರ್ಜುನ ಮಠವಿದ್ದು, ಗ್ರಾಮದ ಅಭಿವೃದ್ಧಿಗೆ ಮಠದ ಪೀಠಾಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕೊಡುಗೆ ಸಾಕಷ್ಟಿದೆ. ಗ್ರಾಮಕ್ಕೆ ವಿದ್ಯುತ್, ಬ್ಯಾಂಕ್ ಹಾಗೂ ಶಿಕ್ಷಣ ತಂದ ಕೀರ್ತಿ ಮಠಕ್ಕಿದೆ.

ಎಲ್ಲ ಕ್ಷೇತ್ರಗಳಲ್ಲೂ ಬೇವೂರು ತನ್ನ ಛಾಪು ಮೂಡಿಸಿದೆ. ಗ್ರಾಮದ ದಿ.ಬಿ.ಕೆ.ಪುಟ್ಟರಾಮಯ್ಯ ಅವರು ವಿರೋಧಪಕ್ಷದ ನಾಯಕರಾಗಿದ್ದರು. ಗ್ರಾಮದಲ್ಲಿ ಸರ್ವ ಜನಾಂಗದವರೂ ಸಮನ್ವಯದಿಂದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದ ಪ್ರತಿ ದೇವಾಲಯಗಳು ಪುರಾತನ ಹಿನ್ನೆಲೆ ಹೊಂದಿವೆ. ಪ್ರಾಕೃತಿಕವಾಗಿಯೂ ಸಾಕಷ್ಟು ಸುಂದರವಾಗಿದೆ. ಗ್ರಾಮದ ಹಬ್ಬಗಳು ಸಹ ವಿಜೃಂಭಣೆಯಿಂದ ನಡೆಯುತ್ತವೆ. ಒಟ್ಟಿನಲ್ಲಿ ನಮ್ಮ ಬೇವೂರು ಒಂದು ಪುಣ್ಯಭೂಮಿ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ. ಬೇವೂರು ಮಠದ ಪೀಠಾಧ್ಯಕ್ಷರು.