ನಾಪೋಕ್ಲು: ದಿ.ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ ಶಾಲೆ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪೊನ್ನಂಪೇಟೆಯ ಕೆಪಿಎಸ್ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿತು. ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ, ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಹಾಗೂ ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಕ್ರಮವಾಗಿ ತೃತೀಯ, ಚತುರ್ಥ ಹಾಗೂ ಐದನೇ ಸ್ಥಾನ ಪಡೆದವು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 15 ತಂಡಗಳು ಪಾಲ್ಗೊಂಡಿದ್ದವು.
ಮೊದಲಿಗೆ ಅರ್ಹತಾ ಸುತ್ತಿನ ಸ್ಪರ್ಧೆ ನಡೆದು ಐದು ತಂಡಗಳನ್ನು ಮೌಖಿಕ ಸುತ್ತಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಹತ್ತು ಸುತ್ತಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. 128 ಅಂಕ ಗಳಿಸಿದ ಕೂಡಿಗೆಯ ಸೈನಿಕ ಶಾಲೆಯ ತಂಡದ ವಿದ್ಯಾರ್ಥಿಗಳಾದ ಎಸ್.ಎಂ.ಉನ್ನತೇಶ್, ನಿಶಾಂತ್ ನಾರಾಯಣ, ಪ್ರಜ್ವಲ್ ಮೇಟಿ ಮತ್ತು ಪ್ರಣವ್‌ರಾವ್‌ವಿಜೇತರಾಗಿ ಹೊರಹೊಮ್ಮಿದರು. 74 ಅಂಕ ಗಳಿಸಿದ ಪೊನ್ನಂಪೇಟೆಯ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿನಿ ಭಟ್, ಮೊಹಮದ್ ಆಶಿಕ್, ಆರ್.ಲಿಖಿತಾ ಮತ್ತು ವಿ.ಡಿ.ನಿಶ್ಮಿತಾ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನಾಪೋಕ್ಲುವಿನ ಅಂಕುರ್ ಶಾಲೆಯ ವಿದ್ಯಾರ್ಥಿಗಳ ತಂಡ 68, ಮೂರ್ನಾಡಿನ ಜ್ಞಾನಜ್ಯೋತಿ ಪ್ರೌಢಶಾಲೆಯ ತಂಡ 61 ಹಾಗೂ ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ತಂಡ 51 ಅಂಕ ಗಳಿಸಿತು.
ಸಮಾರೋಪ ಸಮಾರಂಭದಲ್ಲಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ನೂರ್ ಫಾತಿಮಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ, ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ, ಶ್ರೀರಾಮ ಟ್ರಸ್ಟ್‌ನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಕಲ್ಯಾಟಂಡ ಶಾರದಾ ಅಪ್ಪಣ್ಣ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ, ಶಿಕ್ಷಕ ಭಗವತಿ ಪ್ರಸಾದ ಅಂಬ್ರಟಿ, ಮೂಡೇರ ಕಾಳಯ್ಯ ಇತರರಿದ್ದರು.