ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಅಧ್ಯಕ್ಷ ಕೆ.ಟಿ.ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತ್ತು.
ಕೂಡಿಗೆಯಲ್ಲಿ ಮದ್ಯದ ಅಂಗಡಿಗೆ ಪರವಾನಿಗೆ ನೀಡುವ ವಿಷಯಗಳ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆ ನಡೆದರೂ ಕೂಡ ಅಭಿವೃದ್ಧಿ ಅಧಿಕಾರಿ ಮನಬಂದಂತೆ ಪರವಾನಿಗೆ ನೀಡಿರುವ ಬಗ್ಗೆ ಸದಸ್ಯರಾದ ರವಿ, ಹಮೀದ್, ಜಯಶ್ರೀ ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಇತರರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಡಿಯಲ್ಲಿ ಸರ್ವೆ ನಡೆಸಿ ಜಾಗವನ್ನು ಸಂರಕ್ಷಣೆ ಮಾಡಿ ನಿವೇಶನ ರಹಿತರಿಗೆ ಹಂಚುವ ವ್ಯವಸ್ಥೆಗೆ ಮುಂದಾಗಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಒತ್ತಾಯಿಸಿದರು. ಅದರಂತೆ ವಸತಿ ರಹಿತರ ಪಟ್ಟಿಯ ಪ್ರಕಾರವಾಗಿ ಅರ್ಹ ಫಲಾನುಭವಿಗಳಿಗೆ ಮೊದಲ ಅಧ್ಯತೆ ನೀಡುವ ಬಗ್ಗೆ ಸದಸ್ಯರು ಸಲಹೆ ಸೂಚನೆ ನೀಡಿದರು.
ನಂತರ ಸಭೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮತ್ತು ೧೫ನೇ ಹಣಕಾಸಿನ ಕಾಮಗಾರಿಯ ಅಧ್ಯತೆಯ ಅನುಗುಣವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆದವು. ಮುಂದಿನ ದಿನಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆಯನ್ನು ನಡೆಸುವ ದಿನಾಂಕ ನಿಗದಿ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೆ.ಟಿ.ಗಿರೀಶ್ ಕುಮಾರ್ ಮಾತನಾಡಿ, ಮಾಸಿಕ ಸಭೆಯ ತಿರ್ಮಾನದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅಧ್ಯತೆ, ಬೀದಿ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆಯೇ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆ ಕೈಗೊಳ್ಳಲು ಸದಸ್ಯರ ಸಹಕಾರ ಮುಖ್ಯ ಎಂದ ಅವರು, ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್‌ಗಳ ಶುಚಿತ್ವ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಂಜಳಾ ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಸಾರ್ವಜನಿಕರ ಅರ್ಜಿಗಳ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ.ಪಿ.ಹಮೀದ್, ಅರುಣ್ ರಾವ್, ಮಂಗಳ, ಮೋಹಿನಿ, ಅನಂತ, ಚಂದ್ರು, ಎಚ್.ಎಸ್.ರವಿ, ಲಕ್ಷಿ, ಇನ್ನಿತರು ಸೇರಿದಂತೆ ಕಾರ್ಯದರ್ಶಿ ಪುನೀತ್ ಹಾಜರಿದ್ದರು.