ಜಿಲ್ಲೆ

ರಾಸಾಯನಿಕ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ

ಗೋಪಾಲಕೃಷ್ಣ ಪಾದೂರ್

ಉಡುಪಿ: ಎ.ಜಿ.ಎಸ್. ಎಲ್‌ಪಿಜಿ ಇಂಡಸ್ಟ್ರಿಯಲ್ಲಿ ಶುಕ್ರವಾರ ಬೆಳಗ್ಗೆ 8.50 ಕ್ಕೆ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಕುದಿ ಗ್ರಾಮದ ಜನತೆ ಬೆಳಗ್ಗೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ತೀವ್ರ ಆತಂಕದಲ್ಲಿದ್ದರು. ತಕ್ಷಣವೇ ಅಲ್ಲಿನ ಸಿಬ್ಬಂದಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಉಚಿತ ದೂರವಾಣಿ ಸಂಖ್ಯೆ 1077 ಗೆ ಘಟನೆ ಬಗ್ಗೆ 8.53 ಮಾಹಿತಿ ನೀಡಿದರು. ಕೂಡಲೇ ಪ್ಲಾಂಟ್‌ನಲ್ಲಿನ ಅಪಾಯದ ಸೈರನ್ ಮೊಳಗಿಸಿ, 2 ನಿಮಿಷದೊಳಗೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ಲಾಂಟ್‌ನ ಅಸೆಂಬ್ಲಿ ಪಾಯಿಂಟ್‌ನಲ್ಲಿ ಸೇರಿ ಸ್ಪೀಕರ್ ಮೂಲಕ ಮೂಲಕ ಘಟನೆ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು. ಬೆಳಗ್ಗೆ 9.17 ರ ವೇಳೆಗೆ ಉಡುಪಿಯಿಂದ ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿ, ನೀರು ಸಿಂಪಡಿಸಿದರು. ಎ.ಜಿ.ಎಸ್ ಸಿಬ್ಬಂದಿ ಪ್ಲಾಂಟ್‌ನ ಸುರಕ್ಷತೆಗೆ ನಿರ್ಮಿಸಿರುವ ಟ್ಯಾಂಕ್‌ನಿಂದ ನೀರು ಸಿಂಪಡಿಸುವ ಮೂಲಕ ಪ್ಲಾಂಟಿನ ತಾಪಮಾನವನ್ನು ಕಡಿಮೆಗೊಳಿಸಿ, ಅನಿಲ ಸೋರುವಿಕೆ ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ತೊಡಗಿದರು. 9.50 ರ ವೇಳೆಗೆ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಳಗ್ಗೆ 9.20 ರ ವೇಳೆಗೆ 3 ಆಂಬುಲೈನ್ಸ್‌ಗಳು ಸ್ಥಳಕ್ಕೆ ಆಗಮಿಸಿದ್ದು, ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದವರು ಮತ್ತು ಅಸ್ವಸ್ಥರಾದವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಇದೆಲ್ಲವೂ ನೈಜ ಘಟನೆಯಲ್ಲ. ರಾಸಾಯನಿಕ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ. 10.30ಕ್ಕೆ ಗ್ಯಾಸ್ ಪ್ಲಾಂಟ್‌ನ ಸುತ್ತಮುತ್ತಲಿನ ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಿರುವ ಬಗ್ಗೆ ಹಾಗೂ ತೊಂದರೆಗೊಳಗಾದ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ರವಾನಿಸಿರುವ ಬಗ್ಗೆ ಮಾಹಿತಿ ಪಡೆದ ನಂತರ ಅಣಕು ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ಬಗೆಯ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಯಾವುದೇ ವಿಪತ್ತುಗಳು ಸಂಭವಿಸಿದಾಗ ಜಿಲ್ಲಾಡಳಿತ ಉಚಿತ ಟೋಲ್ ಫ್ರೀ ಸಂ. 1077 ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜೀವಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಇಂದು ನಡೆದ ಅಣಕು ಕಾರ್ಯಾಚರಣೆಯ ಮೂಲಕ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೈಜ ಚಿತ್ರಣ ದೊರೆತಿದೆ. ಅಣಕು ಕಾರ್ಯಚರಣೆ ಆದರೂ ಸಿಬ್ಬಂದಿ ಅತ್ಯಂತ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ತೊಡಗಿಕೊಳ್ಳಲು ಆಪದ ಮಿತ್ರ ಸ್ವಯಂ ಸೇವಕರ ತಂಡ ಸಹ ಸಿದ್ಧವಾಗಿದೆ ಎಂದರು. ಇನ್ಸಿಡೆಂಟ್ ಕಮಾಂಡರ್ ಆಗಿದ್ದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ನ್. ಮಾತನಾಡಿದರು. ಕುದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು ಉಪಸ್ಥಿತರಿದ್ದರು.