ಜಿಲ್ಲೆ

ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಸತ್ಯಾಗ್ರಹ

ಕೂಡಲಸಂಗಮ: ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮ ಸಂಗಮೇಶ್ವರ ದೇವಾಲಯ ಹೊರ ಆವರಣದ ರಥ ಬೀದಿ ರಸ್ತೆ ಬಯಲು ಜಾಗದಲ್ಲಿ ಮದ್ಯ ನಿಷೇಧ ಆಂದೋಲನದ ರಾಯಚೂರಿನ ರಂಜಾನಬಿ, ರೇಣಕಮ್ಮ, ಅಭಯ, ಬಳ್ಳಾರಿಯ ಕೊಟ್ರಮ್ಮ, ಶಂಕ್ರಮ್ಮ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟ ಆರಂಭಿಸಿದರು.

ಸಂಚಾಲಕ ಅಭಯ ಎಂ. ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ಕುಟುಂಬಗಳು ಮದ್ಯಪಾನದಿಂದ ಬೀದಿಗೆ ಬೀಳುತ್ತಿವೆ. ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಲವಾಗಿದ್ದು, ಮದ್ಯಪಾನ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಕೂಡಲಸಂಗಮದಲ್ಲಿ ಇಂದಿನಿಂದ ನಾಲ್ಕು ದಿನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಮತ್ತು ಬುಧವಾರ ಜಲಸತ್ಯಾಗ್ರಹ ನಡೆಸಲಾಗುವುದು ಎಂದರು.

ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಸ್ವರ್ಣ ಭಟ್ಟ ಮಾತನಾಡಿ, ಮದ್ಯ ನಿಷೇಧ ಹೋರಾಟಗಾರ್ತಿ ರೇಣುಕಮ್ಮ ಅವರ ಒಂದನೇ ವರ್ಷದ ಸ್ಮರಣಾರ್ಥವಾಗಿ ಕೂಡಲಸಂಗಮದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. 2019 ನ. 7 ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡಲಾಗಿತ್ತು. ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಎರಡು ವಾರದೊಳಗೆ ಸಿಎಂ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಎರಡು ತಿಂಗಳು ಕಳೆದರೂ ಇನ್ನೂ ಭೇಟಿಗೆ ಕರೆದಿದಿಲ್ಲ. ಈ ನಿರ್ಲಕ್ಷೃವನ್ನು ಖಂಡಿಸುತ್ತೇವೆ ಎಂದರು. ರಾಜ್ಯದ 15 ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡರು.

ಬುತ್ತಿ ತಂದಿದ್ದ ಹೋರಾಟಗಾರರು
ಹೋರಾಟಗಾರರು ಸೋಮವಾರ ರೊಟ್ಟಿ ಬುತ್ತಿಯೊಂದಿಗೆ ಹೋರಾಟದಲ್ಲಿ ಪಾಲ್ಗೊಂಡರು. ಸಂಘಟಕರು ಹೋರಾಟ ಜಾಗದಲ್ಲಿಯೇ ಊಟದ ತಯಾರಿಯನ್ನು ಮಾಡಿದ್ದರು. ಇನ್ನು ಕೆಲವರು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು.