ಜಿಲ್ಲೆ

ಕಾಮಗಾರಿ ವಿಳಂಬಕ್ಕೆ ರೈತರ ಆಕ್ರೋಶ

ವಿಜಯಪುರ: ಕೂಡಗಿ ಸಮೀಪ ರೈಲ್ವೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘಟನೆ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ ಮೂಲಕ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ಅಖಂಡ ಕರ್ನಾಟಕ ರೈತ ಸಂಘಟನೆ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೂಡಗಿ ಬಳಿ ಹಾಯ್ದು ಹೋಗುವ ರೈಲ್ವೆ ಬ್ರಿಜ್ ಕೆಳಗಡೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಹೀಗಾಗಿ ಕಾಲುವೆಗಳಿಗೆ ನೀರು ಹರಿಸಲು ಆಗುತ್ತಿಲ್ಲ. ಬೇಸಿಗೆ ಹಿನ್ನೆಲೆ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಕೆರೆ ತುಂಬಿಸಬೇಕಿದೆ. ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.
ಸೇತುವೆ ಬಳಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ವಿಳಂಬವಾಗುತ್ತಿದೆ. ಬಸವನಬಾಗೆವಾಡಿ ತಾಲೂಕಿನ ಕುದರಿ ಸಾಲವಾಡಗಿ, ಕುಲಬೆಂಚಿ, ವಡವಡಗಿ, ನಾಗರಾಳ ಹುಲಿ, ಸೋಮನಾಳ, ತಳೇವಾಡ, ಮನಗೂಳಿ, ಮಸೂತಿ, ಗ್ರಾಮಗಳ ವ್ಯಾಪ್ತಿಗೆ ಬರುವ ಹಾಗೂ ಸಿಂದಗಿ ತಾಲೂಕಿನ ಬಮ್ಮನಜೋಗಿ, ಕನ್ನೊಳ್ಳಿ, ಬೋರಗಿ, ಬ್ಯಾಕೋಡ, ಕೊಗಟನೂರು, ಇಬ್ರಾಹಿಂಪುರ, ಹುರದಾಳ ಗ್ರಾಮಗಳ ವ್ಯಾಪ್ತಿಗೆ ಬರುವ ಕೆರೆಗಳಿಗೆ ಹಾಗೂ ಬಾಂದಾರಗಳಿಗೆ ಕೋರವಾರ ಶಾಖಾ ಕಾಲುವೆ ಮುಖಾಂತರ ನೀರು ಹರಿಸಬೇಕಿದೆ. ರೈಲ್ವೆ ಬ್ರಿಜ್ ಕೆಳಗೆ ಕೈಗೊಂಡಿರುವ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ರೈಲು ತಡೆ ನಡೆಸಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಮುಖಂಡರಾದ ಸದಾಶಿವ ಬರಟಗಿ, ಸಿದ್ಧರಾಮ ಅಂಗಡಗೇರಿ, ರೇವಣೆಪ್ಪ ಕಡಗೋಲ, ಗಂಗಯ್ಯ ಚಿಕ್ಕಮಠ, ಅಣ್ಣುಗೌಡ ಪಾಟೀಲ, ವಿಠ್ಠಲ ಬಿರಾದಾರ, ರವಿ ಕೊಲ್ಲೂರ, ದೇವೇಂದ್ರ ಕೊಡೇಕಲ, ಸುರೇಖಾ ರಜಪೂತ, ರಾಮಣ್ಣ ಶಿರಮಗೋಳ, ಮಳಸಿದ್ದ ನಾಯ್ಕೋಡಿ, ರಮೇಶ ತೋಟದ, ಜಿ.ಎಸ್. ಇಂಗಳಗಿ, ಸಂಗಮೇಶ ಬಾಗಿ, ನಾಗಪ್ಪ ಹಡಪದ, ಬಸವರಾಜ ಅಗಸರ, ಕಾಶಪ್ಪ ಬಡಿಗೇರ, ಸಿದ್ದಪ್ಪ ಕೊರಬು, ಲಾಲಸಾಬ ಹಳ್ಳ್ಳೂರ, ಈರಣ್ಣ ಮಠಪತಿ, ಕೃಷ್ಣಪ್ಪ ಬಮ್ಮರಡ್ಡಿ, ಧರೆಪ್ಪ ಅವಟಿ, ಚಂದ್ರಾಮ ತೆಗ್ಗಿ, ನೂರಾರು ರೈತರು ಪಾಲ್ಗೊಂಡಿದ್ದರು.