ಕುಡಚಿ:ಮಹಾರಾಷ್ಟ್ರದ ಅವರವಾಡ ಗ್ರಾಮಕ್ಕೆ ಹೋಗಿದ್ದ ಕುಡಚಿಯ 12 ವರ್ಷದ ಬಾಲಕಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.ಪ್ರಕರಣ ಶನಿವಾರ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ಪುರಸಭೆ ಅಧಿಕಾರಿಗಳು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭಾನುವಾರ ಕುಡಚಿ ಪಟ್ಟಣವನ್ನು 3ನೇ ಬಾರಿಗೆ ಸೀಲ್‌ಡೌನ್ ಮಾಡಿದ್ದಾರೆ.
ಕುಡಚಿಯಲ್ಲಿ ಕೆಲ ದಿನಗಳಿಂದ ಯಾವುದೇ ಪ್ರಕರಣಗಳು ಪತ್ತೆಯಾಗಿರಲಿಲ್ಲ. ರಾಯಬಾಗ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಮಾತನಾಡಿ, ಕುಡಚಿ ಪಟ್ಟಣದ 12 ವರ್ಷದ ಬಾಲಕಿ ಮೇ 18ರಂದು ಮಹಾರಾಷ್ಟ್ರದ ಅವರವಾಡ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದಾಳೆ.
ಆಗ ಅಲ್ಲಿಯ ಅಧಿಕಾರಿಗಳು ಬಾಲಕಿಯನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಹಾಗಾಗಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕುಡಚಿಯನ್ನು ಮತ್ತೆ ಸೀಲ್‌ಡೌನ್ ಮಾಡಲಾಗಿದೆ. ಬಾಲಕಿ ಸಂಪರ್ಕದಲ್ಲಿರುವ 10 ಜನರನ್ನು ಸ್ಥಳೀಯ ಖಾಸಗಿ ಲಾಡ್ಜ್‌ನಲ್ಲಿ ಕ್ವಾರಂಟೈನ್ ಮಾಡಿಲಾಗಿದೆ. ಸೋಮವಾರ ಗಂಟಲು ದ್ರವ ಸಂಗ್ರ ಹಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಕುಡಚಿ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ಮಾತನಾಡಿ, ಪಟ್ಟಣದಲ್ಲಿ ಈಗಾಗಲೇ 2 ಕಡೆ ಸೀಲ್‌ಡೌನ್ ಮಾಡಲಾಗಿದೆ.
ಜನರಿಗೆ ಹಾಲು, ಹಣ್ಣು, ತರಕಾರಿ ಹಾಗೂ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದರು. ಕುಡಚಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ ಕಲಟ್ಟಿ, ಎಸ್‌ಐ ಶಿವರಾಜ ಧರಿಗೋಣ ಇದ್ದರು.
ಅರಟಾಳ ವರದಿ: ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಅರಟಾಳ ಗ್ರಾಮದ 4 ಜನ ಕೂಲಿಕಾರ್ಮಿಕರನ್ನು ಶನಿವಾರ ಹೋಂ ಕ್ವಾರಂಟೈನ್ ಮಾಡಲಾಗಿದೆ. ಸ್ಥಳೀಯ ಗ್ರಾಪಂ ಪಿಡಿಒ ಎ.ಜಿ. ಎಡಕೆ ಮಾತನಾಡಿ, ಹೋಂ ಕ್ವಾರಂಟೈನ್ ಮಾಡಿದವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. 14 ದಿನಗಳ ವರೆಗೆ ಹೊರಗಡೆ ತಿರುಗಾಡಬಾರದು. ಬೇರೊಬ್ಬರ ಜತೆ ಮಾತನಾಡುವಾಗ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.