ನರಗುಂದ: ತಾಲೂಕಿನ ವಿವಿಧ ಗ್ರಾಮಗಳಲ್ಲಿ 2500 ವರ್ಷದ ಪ್ರಾಚೀನ ಕಾಲದ ಮಣ್ಣಿನ ಗಡಿಗೆ, ಕುಡಿಕೆ. 3000 ವರ್ಷದ ಗಡಿಗೆ, ಮಡಿಕೆ, ನೇಗಿಲು ರೇಖಾ, 8ನೇ ಶತಮಾನದ ದೇವಾಲಯದ ಪುರಾವೆಗಳು ಪತ್ತೆಯಾಗಿವೆ.
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ವಿಭಾಗದ ಮುಖ್ಯಸ್ಥ ಡಾ.ಎಲ್.ಪಿ. ಮಾರುತಿ, ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ. ಷಡಕ್ಷರಯ್ಯ, ಸಹಾಯಕ ಪ್ರಾಧ್ಯಾಪಕ ಡಾ. ಜಗದೀಶ ಅಸೊದೆ, ಸಂಶೋಧನಾ ವಿದ್ಯಾರ್ಥಿಗಳಾದ ಡಾ. ಮನಾಲಿ, ಉಮೇಶ ರಂಗಣ್ಣವರ, ರಮೇಶ ಹೊಣ್ಣೂರ, ಸಹನಾ ಹೊಸಮನಿ, ಪೂಜಾ ಪಾಟೀಲ, ವೈಷ್ಣವಿ ಜೋಶಿ, ಚಂದು ಪೂಜಾರಿ, ಅನುಷ್ಕಾ ನೊರೊಣ್ಣ, ಪವನ ಹಾದಿಮನಿ, ಎ.ಕೆ. ಅಭಿಷೇಕ ಅವರನ್ನು ಒಳಗೊಂಡ 14 ಜನರ ತಂಡ ಅನ್ವೇಷಣೆ ನಡೆಸಿದೆ.
ತಾಲೂಕಿನ ಹಾಳ-ಹಳ್ಳಿಕೇರಿ ಮಡ್ಡಿಯಲ್ಲಿ ಫೆ. 18ರಂದು 60 ಜನ ಅನ್ವೇಷಣೆ ನಡೆಸಿದಾಗ 2500 ವರ್ಷಗಳ ಹಿಂದಿನ ಮಣ್ಣಿನ ಗಡಿಗೆ, ಮಡಿಕೆ ಪತ್ತೆಯಾಗಿವೆ. ಜೂ. 7ರಂದು ನಡೆಸಿದ ಅನ್ವೇಷಣೆಯಲ್ಲಿ ಕಬ್ಬಿಣದ ಬೃಹತ್ ಶಿಲಾ ಸಂಸ್ಕೃತಿಯ ಕಪ್ಪು ಮತ್ತು ನಯವಾಗಿ ಮಾಡಿದ ಗಡಿಗೆ, ಮಡಿಕೆಗಳ ಜತೆಗೆ 16ನೇ ಶತಮಾನದ ಗಡಿಗೆ, ಮಡಿಕೆಗಳು, ಒಳ್ಳು, ಬೀಸುವ ಕಲ್ಲುಗಳು ಪತ್ತೆಯಾಗಿವೆ. ಇಲ್ಲಿ ಜನವಸತಿ ಇತ್ತು ಎಂಬುದರ ಬಗ್ಗೆ ತಿಳಿಸುತ್ತದೆ.
ಕೊಣ್ಣೂರ ಗ್ರಾಮದ ಶ್ರೀಪರಮೇಶ್ವರ ದೇವಾಲಯದ ಜೀರ್ಣೋದ್ಧಾರ ವೇಳೆ ಗರ್ಭಗೃಹದ ಗೋಡೆ ಕೆಳಗಡೆ 11 ಪದರಿನ ಇಟ್ಟಂಗಿ ಸಾಲುಗಳ ಗೋಡೆ ಪತ್ತೆಯಾಗಿದೆ. ಈ ಇಟ್ಟಂಗಿ ಲಕ್ಷಣದಿಂದ ಗೋಡೆಯ ಸುಮಾರು 2000 ವರ್ಷಗಳ ಹಿಂದಿನ ಶಾತವಾಹನರ ಕಾಲದ್ದೆಂದು ತಿಳಿದು ಬಂದಿದೆ. ಆದರೆ, ಈ ಕಾಲದ ಜನವಸತಿ ಪುರಾವೆಗಳ ಬಗ್ಗೆ ಪತ್ತೆ ಹಚ್ಚುವ ಅಧ್ಯಯನ ನಡೆಸುವ ಅವಶ್ಯಕತೆ ಇದೆ.
ವಾಸನ ಗ್ರಾಮದಲ್ಲಿ ಕ್ರಿ.ಶ. 8ನೇ ಶತಮಾನದ ದೇವಾಲಯ ಶಿಲ್ಪವುಳ್ಳ ಪುರಾವೆಗಳು ಪತ್ತೆಯಾಗಿವೆ. ಸ್ಥಳೀಯರ ಪ್ರಕಾರ ಅಲ್ಲೊಂದು ವಾಸುದೇವ ದೇವಾಲಯ ಇತ್ತು ಎಂದು ಹೇಳಲಾಗಿದೆ. ಆದರೆ, ಮಲಪ್ರಭಾ ನದಿ ಪ್ರವಾಹದಿಂದ ದೇವಸ್ಥಾನ ಸಂಪೂರ್ಣ ನಾಶವಾಗಿ ಹೋಗಿದೆ. ಇಲ್ಲಿರುವ ಒಂದೇ ಸ್ಥಳದಲ್ಲಿ ಶನಿವಾರ ಅಧ್ಯಯನ ನಡೆಸಿದಾಗ ಒಂದೇ ದೇವಸ್ಥಾನದ 60ಕ್ಕೂ ಹೆಚ್ಚು ಕಲ್ಲುಗಳು ಚದುರಿ ಹೋಗಿರುವುದು ತಿಳಿದು ಬಂದಿದೆ. ನದಿ ದಡದಲ್ಲಿ ನಿರಂತರ ಮರಳು ಗಣಿಗಾರಿಕೆಯಿಂದ ಕಂದಕ ಉಂಟಾಗಿದೆ. ಅರ್ಧಂಬರ್ಧ ಮುಚ್ಚಿ ಹೋಗಿದ್ದ ಶಿಲಾ ಫಲಕ ಸ್ವಚ್ಛಗೊಳಿಸಿದಾಗ ಅವುಗಳು ಒಂದು ದೇವಾಲಯದ ಅಧಿಷ್ಟಾನ ಬಿತ್ತಿ (ಕೆಳಭಾಗದ ಗೋಡೆ), ಅಭಿಷೇಕದ ನೀರು ಹೋಗುವ ಪ್ರಣಾಳ, ಕಂಬದ ಭಾಗಗಳು ಗೋಚರಿಸಿವೆ. ಪ್ರಣಾಳದಲ್ಲಿ ಮಕರಗಳ ಬಾಯಿ ಕೆತ್ತಲಾಗಿದೆ. 7 ಶಿಲಾ ಪೆಟ್ಟಿಗೆಗಳ ಮೇಲೆ ಚೈತ್ಯಾಕಾರ, ಅರ್ಧ ವೃತ್ತಾಕಾರ, ಮೇಲೆ ಕೀರ್ತಿ ಮುಖ, ಗರುಡ, ಹೂವಿನ ಅಲಂಕಾರವಿದೆ. 2-3 ಫಲಕಗಳ ಎರಡೂ ಮಗ್ಗುಲಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಒಂದರಲ್ಲಿ ಜೋತು ಬಿದ್ದ ಮನೆ, ಮುತ್ತಿನ ಗೊಂಚಲು ಇದೆ. ಈ ಎಲ್ಲ ಶಿಲ್ಪಗಳ ಕಲಾ ಲಕ್ಷಣ ಹಾಗೂ ಬಳಸಿದ ಮರಳು ಮಿಶ್ರಿತ ಶಿಲೆಯಿಂದ ಇದೊಂದು ಒಂದೇ ಕಾಲಘಟ್ಟದ ದೇವಾಲಯದ ಪುರಾವೆಗಳೆಂದು ತಿಳಿಸಲಾಗಿದೆ. ಅಲ್ಲದೆ ಈ ದೇವಾಲಯದ ಕಾಲಮಾನ ರಾಷ್ಟ್ರಕೂಟರದೆಂದು ಅಭಿಪ್ರಾಯಪಡಲಾಗಿದೆ. ಒಂದು ಫಲಕದಲ್ಲಿ ನೇಗಿಲು ರೇಖಾ ಚಿತ್ರ ಕೆತ್ತಲಾಗಿದೆ. ಇದು ರಾಷ್ಟ್ರಕೂಟರ ಕಾಲದಲ್ಲಿ ಕೃಷಿಗೆ ಪ್ರಾಧಾನ್ಯತೆ ಕೊಟ್ಟಿರುವುದು ತಿಳಿದು ಬಂದಿದೆ. ಅಲ್ಲಿ ಕಾಣುವ ಗರುಡ ಚಿತ್ರಗಳಿಂದ ದೇವಾಲಯವು ವೈಷ್ಣವ ಸಂಪ್ರದಾಯ ಪಂಥಕ್ಕೆ ಸೇರಿದ್ದೆಂದು ಹೇಳಲಾಗಿದೆ. ಈ ಎಲ್ಲ ಪುರಾವೆಗಳು ವಿಸ್ತಾರವಾಗಿ ಹರಡಿರುವುದರಿಂದ ಇವುಗಳನ್ನು ಒಂದೆಡೆ ಸಂಗ್ರಹಿಸಿ ಅವಶ್ಯಕ ವಸ್ತುಗಳನ್ನು ಬಳಸಿಕೊಂಡು ದೇವಾಲಯ ಮರು ನಿರ್ಮಿಸಬೇಕು ಎನ್ನುತ್ತದೆ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಆರ್.ಎಂ. ಷಡಕ್ಷರಿ ತಂಡ. ಅಲ್ಲದೆ, ಈ ಕುರಿತು ರಾಜ್ಯ ಹಾಗೂ ಕೇಂದ್ರ ಪ್ರಾಚ್ಯವಸ್ತು ಪುರಾತತ್ವ ಇಲಾಖೆಗಳಿಂದ ಕ್ಷೇತ್ರ ಕಾರ್ಯ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.