ಜಿಲ್ಲೆ

ಕವಿವಿ ಘಟಿಕೋತ್ಸವ 24ರಂದು: ವಿಎಸ್​ವಿ ಪ್ರಸಾದ ಸೇರಿ ಮೂವರಿಗೆ ಗೌಡಾ

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವವನ್ನು ಸೆ. 24ರಂದು ಏರ್ಪಡಿಸಲಾಗಿದೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಕವಿವಿ ಗಾಂಧಿ ಭವನದಲ್ಲಿ ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅಧ್ಯಕ್ಷತೆಯಲ್ಲಿ ಏರ್ಪಡಿಸಿರುವ ಘಟಿಕೋತ್ಸವದಲ್ಲಿ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್​.ಅಯ್ಯಪ್ಪನ್​ ಘಟಿಕೋತ್ಸವ ಭಾಷಣ ಮಾಡಲಿದ್ದು, ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​ ಆಗಮಿಸಲಿದ್ದಾರೆ ಎಂದರು.
ಕವಿವಿ ಗೌರವ ಡಾಕ್ಟರೇಟ್​ಗೆ ಬಂದಿದ್ದ 17 ಅಭ್ಯರ್ಥಿಗಳ ಹೆಸರಿನ ಪೈಕಿ 10 ಜನರ ಹೆಸರನ್ನು ಅಂತಿಮಗೊಳಿಸಿ ಸಮಿತಿಗೆ ನೀಡಲಾಗಿತ್ತು. ಸಮಿತಿಯು ಮೂವರ ಹೆಸರನ್ನು ರಾಜಭವನಕ್ಕೆ ಶಿಫಾರಸ್ಸು ಮಾಡಿತ್ತು. ರಾಜ್ಯಪಾಲರು ಮೂವರ ಹೆಸರನ್ನೂ ಅಂತಿಮಗೊಳಿಸಿ ಗೌಡಾ ನೀಡಲು ಅನುಮೋದನೆ ನೀಡಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ 25,425 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದು, 120 ವಿದ್ಯಾರ್ಥಿಗಳಿಗೆ 278 ಚಿನ್ನದ ಪದಕ ಪ್ರದಾನ ಮಾಡಲಾಗುವುದು. ಉಳಿದಂತೆ 52 ವಿದ್ಯಾರ್ಥಿಗಳಿಗೆ ಪಾರಿತೋಷಕ, 73 ವಿದ್ಯಾರ್ಥಿಗಳಿಗೆ ಶಿಷ್ಯವೇತನ, 82 Rank ನೀಡಲಿದ್ದು, ಒಟ್ಟು 327 ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 149 ಪಿಎಚ್​.ಡಿ ಪದವಿ, 1 ಎಂಫಿಲ್​ ಪದವಿ, 4067 ಸ್ನಾತಕೋತ್ತರ ಪದವಿ, 21,139 ಸ್ನಾತಕ ಪದವಿ, 47 ಕಾನೂನು ಪದವಿ, 22 ಡಿಪ್ಲೋಮಾ ಪದವಿ ಪ್ರದಾನ ನೆರವೇರಲಿದೆ ಎಂದರು.
ಕುಲಸಚಿವರಾದ ಡಾ.ಎ.ಚನ್ನಪ್ಪ, ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಡಾ. ಸಿ.ಕೃಷ್ಣಮೂರ್ತಿ, ಇತರರು ಇದ್ದರು.