ವಿಜಯವಾಣಿ ಸುದ್ದಿಜಾಲ ಹೆಬ್ರಿ
ಆರು ಶತಮಾನಗಳಿಂದ ಕೊಕ್ಕರ್ಣೆ ಸೂರಲು ಅರಮನೆಯ ಜೈನ ಅರಸರ ಆಡಳಿತದಲ್ಲಿ ಕುಚ್ಚೂರು ಅಭಿವೃದ್ಧಿ ಉದ್ದೇಶದಿಂದ ದೈವಕ್ಕೆ ಕೋಲಸೇವೆ ಸಲ್ಲಿಸುತ್ತಾ ಬಂದಿದೆ. ಜತೆಗೆ ಮಾತ್ಕಲ್(ಮಾತನಾಡುವ ಕಲ್ಲು) ಸಾನಿಧ್ಯದಲ್ಲಿ ಕುಚ್ಚೂರು ಕಂಬಳೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಡಿ.12ರಂದು ನಡೆಯಲಿದೆ.
ಸೂರಾಲು ಅರಮನೆಗೆ ಆಡಳಿತದಲ್ಲಿರುವ ಬೇಳಂಜೆ, ಕುಚ್ಚೂರು, ಚಾರ, ನಾಡ್ಪಾಲು ಭಾಗದ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಶ್ರೀ ಕೊಡಮಣಿತ್ತಾಯ, ಧೂಮಾವತಿ ಗರಡಿಯ ಸಾಂಪ್ರದಾಯಿಕ ಕುಚ್ಚೂರು ಕಂಬಳೋತ್ಸವ ನಡೆಯಲಿದೆ.
ಜೈನರ ಆಳ್ವಿಕೆಯಾಗಿಲ್ಲಿ ಕುಚ್ಚೂರು ಬ್ರಾಹ್ಮಣರ ಮೇಲುಸ್ತುವಾರಿ, ಕುಚ್ಚೂರು ದೊಡ್ಡ ಮನೆಯವರ ಯಜಮಾನಿಕೆಯಲ್ಲಿ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿದೆ. ಉಡುಪಿ ಜಿಲ್ಲೆಯ 2ನೇ ಅತಿ ದೊಡ್ಡ ಸಾಂಪ್ರದಾಯಿಕ ಕಂಬಳ ಇದು. ಜಾರ್ಮಕ್ಕಿ ಶೆಟ್ಟರ ಮನೆತನದ ಕೋಣಗಳನ್ನು ಸಿಂಗರಿಸಲಾಗುತ್ತದೆ. ಬಳಿಕ ಕೊಡಮಣಿತ್ತಾಯ ಧೂಮಾವತಿ, ಪರಿವಾರ ದೈವಗಳ ದೇವಸ್ಥಾನದಲ್ಲಿ ಪೂಜೆ ನೆರವೇರಿ ವಾದ್ಯಘೋಷದ ಮೂಲಕ ಮೆರವಣಿಗೆಯೊಂದಿಗೆ ಕಂಬಳ ಗದ್ದೆಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಕಂಬಳದ ನಂತರ ಗದ್ದೆಯಲ್ಲಿ ವಾದ್ಯ ಘೋಷಗಳೊಂದಿಗೆ ಮೂರು ಸುತ್ತು ಬಲಿಬಂದು, ಗದ್ದೆಯ ಮೇಲ್ಭಾಗದಲ್ಲಿ ಬ್ರಹ್ಮನಿಗೆ ಪೂಜೆ ನೆರವೇರಿಸಲಾಗುತ್ತದೆ. ಅಂತಿಮವಾಗಿ ಗರಡಿಗೆ ಆಗಮಿಸಿ ಪೂಜೆ ಮುಗಿಸಿ ಪ್ರಸಾದ ಹಂಚಲಾಗುತ್ತದೆ.
ಅನಾರೋಗ್ಯಕ್ಕೆ ತುತ್ತಾದ ಜಾನುವಾರುಗಳನ್ನು ಕಂಬಳ ಗದ್ದೆಗೆ ಇಳಿಸಿದರೆ ಶೀಘ್ರವೇ ಗುಣಮುಖವಾಗುತ್ತವೆ ಎಂಬ ಪ್ರತೀತಿ ಪೂರ್ವ ಕಾಲದಿಂದಲೂ ಆಚರಣೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಊರವರು ಅನಾರೋಗ್ಯಕ್ಕೆ ಈಡಾಗಿರುವ ಜಾನುವಾರುಗಳನ್ನೇ ಗದ್ದೆಗೆ ಇಳಿಸುತ್ತಾರೆ.
ಅತೀ ಕಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ, ಹಲಗೆ ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಉದ್ಯಮಿ ಸತೀಶ್ ಶೆಟ್ಟಿ ಜಾರ್ಮಕ್ಕಿ ಪ್ರಶಸ್ತಿ ಪ್ರಾಯೋಜಕತ್ವ ವಹಿಸಿದ್ದಾರೆ.
ಬಹಳ ಹಿಂದಿನಿಂದಲೂ ಕಂಬಳ ನಡೆಯುತ್ತ ಬರುತ್ತಿದೆ. ಕುಚ್ಚೂರು ಕೊಡಮಣಿತ್ತಾಯ ಸಾಂಪ್ರದಾಯಿಕ ಕಂಬಳ ಐದು ಶತಮಾನಗಳ ಇತಿಹಾಸ ಹೊಂದಿದೆ. ನಂಬಿದವರಿಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಹಳ್ಳಿಯ ಸೊಗಡಿನ ಜಾನಪದ ಕ್ರೀಡೆ ಸಾಂಪ್ರದಾಯಿಕ ದೈವಭಕ್ತಿಯ ಆರಾಧನೆಯೂ ಹೌದು. -ಕಿರಣ್ ತೋಳಾರ್, ಅಧ್ಯಕ್ಷ, ಶ್ರೀ ಕೊಡಮಣಿತ್ತಾಯ ಧೂಮಾವತಿ ಗರಡಿ ಆಡಳಿತ ಮಂಡಳಿ ಟ್ರಸ್ಟ್ ಕುಚ್ಚೂರು ಪ್ರತಿ ವರ್ಷ ಕುಚ್ಚೂರು ಕಂಬಳ ಬಹಳಷ್ಟು ಜನರ ಸೇರುವಿಕೆಯೊಂದಿಗೆ ನಡೆಯುತ್ತದೆ. ಜತೆಗೆ ಜನರಿಗೆ ಕೃಷಿಯ ಮನೋಭಾವದೊಂದಿಗೆ ಮನರಂಜನೆಯೂ ದೊರೆಯುತ್ತದೆ. ಸಾಂಪ್ರದಾಯಿಕ ಕಂಬಳ ಊರಿನ ಪ್ರತೀಕದಂತೆ. -ನಿತ್ಯಾನಂದ ಭಟ್ ಕುಚ್ಚೂರು ಕಂಬಳ ಕ್ರೀಡಾ ಸಮಿತಿ ಅಧ್ಯಕ್ಷ https://www.vijayavani.net/cleanup-program-at-trasi-beach https://www.vijayavani.net/rickshaw-stand-inaugurated-in-chittoor