ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಬೇಸಿಗೆಯಲ್ಲಿ ಹರಿಯಲೋ ಬೇಡವೋ ಎಂದು ತೆವಳುತ್ತಿದ್ದರೆ, ಮಳೆಗಾಲದಲ್ಲಿ ರೌದ್ರಾವತಾರ ತಾಳುವ ಕುಬ್ಜಾ ನದಿ ಮೇಲಿನ ಕಾಲುಸಂಕ ಕೈಲಾಸ ಮಾರ್ಗವಾಗಿ ಕಾಡುತ್ತಿದೆ. ಹೆಜ್ಜೆಯ ಮೇಲೊಂದು ಹೆಜ್ಜೆ ಇಡುವಾಗ ಕಾಲು ಜಾರಿದರೆ ಶಿವನ ಪಾದವೇ ಗತಿಯಾಗುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಗಾಂಧಿ ಕಂಡ ಗ್ರಾಮ ರಾಜ್ಯವಾಗದ ಕುಮ್ಟಿಬೇರು ಎಂಬ ಪುಟ್ಟ ಊರಿನ ಜನರ ಕತೆ ಇದು. ಇಲ್ಲಿನ ಕುಬ್ಜಾನದಿ ಕಾಲುಸಂಕ ಊರಿನವರಿಗೆ ವರವೂ ಹೌದು, ಶಾಪವೂ ಹೌದು.
ಬೈಂದೂರು ತಾಲೂಕಿನ ಯಡಮೊಗೆ ಗ್ರಾಮ ವ್ಯಾಪ್ತಿಯ ರಾಂಪೈಜೆಡ್ಡು ಕುಮ್ಟಿಬೇರು ನಾಗರಿಕರಿಗೆ ಕುಬ್ಜಾ ನದಿಯ ಕಾಲುಸಂಕದ್ದೇ ಸಮಸ್ಯೆ. ಮಳೆಗಾಲದಲ್ಲಿ ಎದೆ ಝಲ್ ಎನಿಸುವಂತೆ ತೋರುವ ನದಿಯ ವೇಗ, ಗಿರಗಿರ ಸುತ್ತುವ ಸುಳಿ, ಕೆಂಬಣ್ಣದೊಂದಿಗೆ ಭೋರ್ಗರೆಯುವ ರೀತಿ ಕಲ್ಲಿಗೂ ಭಯ ಹುಟ್ಟಿಸುವಂತಿದೆ. ಮೇಲೆ ನಡೆಯುತ್ತಿರುವಾಗ ಭಯಕ್ಕೆ ಕೈಕಾಲು ನಡುಗಿ ನಿಯಂತ್ರಣ ತಪ್ಪಿ ಬಿದ್ದರೆ ಅವರ ಶವ ಸಿಗುವುದೂ ಕಷ್ಟ. ಇಂತಹ ಅಪಾಯದ ಕಾಲುಸಂಕದಲ್ಲಿ ನಡೆದು ಜೀವ ಉಳಿಸಿಕೊಳ್ಳುತ್ತಿರುವ ಅಲ್ಲಿನ ಜನರದ್ದು ನಿಜಕ್ಕೂ ಸಾಧನೆಯೇ.
ಕಾಲುಸಂಕದ ಬದಲಾಗಿ ಕೆರೆಕಟ್ಟೆ ಹೊಸಂಗಡಿ ಮೂಲಕ ಸುತ್ತಿಬಳಸಿ ಹೋಗಬಹುದಾಗಿದೆ. ಆದರೆ, ಕೆಂಪುಕಲ್ಲು ಗಣಿ ರಸ್ತೆ ನುಂಗಿ ಹಾಕಿದೆ. ರಾತ್ರಿ ವೇಳೆ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಇಲ್ಲಿನವರ ಪಾಡು ಹೇಳತೀರದು. ಇಲ್ಲಿ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು ಕ್ವಾರಿ ಪಶ್ಚಿಮಘಟ್ಟಕ್ಕೆ ಅಪಾಯ ತರುವಷ್ಟು ಭೀಕರವಾಗಿದೆ. ಇದನ್ನು ತಡೆಯಲೂ ಆಡಳಿತಕ್ಕೆ ಆಗುತ್ತಿಲ್ಲ. ಶಾಶ್ವತ ಕಾಂಕ್ರೀಟ್ ಕಾಲುಸಂಕ ಮಾಡಲೂ ಅವರಿಗೆ ಸಮಯ ಇಲ್ಲ. ಮಳೆಗಾಲಕ್ಕೂ ಮುನ್ನ ನಮ್ಮ ಹಣದಲ್ಲೇ ಕಾಲುಸಂಕ ಮಾಡಿಕೊಳ್ಳುತ್ತೇವೆ. ದಾಟುವಾಗ ಜೀವಕ್ಕೆ ಹೆಚ್ಚು ಕಮ್ಮಿಯಾದರೆ ಅದರ ಹೊಣೆ ಹೊರೋದು ಯಾರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ಅಸಹಾಯಕ ಜನರು.
ಯಡಮೊಗೆ ಗ್ರಾಮ ರಾಮನಹಕ್ಲು, ಕುಮ್ಟಿಬೇರು, ಹಳ್ಳಿಹೊಳೆ ಗ್ರಾಮ ದೇವರಬಾಳು, ಕಬ್ಬಿನಾಲೆ ಇವುಗಳು ನಕ್ಸಲೈಟ್ ಎನ್‌ಕೌಂಟರ್ ಪ್ರದೇಶ. ದೇವರಬಾಳು ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಅಜಿತ್ ಕುಸುಬಿ, ಉಮೇಶ ಜೋಗಿ ಹತರಾಗಿದ್ದರು. ನಕ್ಸಲ್ ಪ್ರತೀಕಾರಕ್ಕೆ ಹಳ್ಳಿಹೊಳೆಯಲ್ಲಿ ಒಬ್ಬರು ಬಲಿಯಾಗಿದ್ದರು. ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ ಹೆಸರಲ್ಲಿ ಆಗಿದ್ದು ಕೋಟಿ ರೂ. ಖರ್ಚು. ಆದರೆ, ಅಭಿವೃದ್ಧಿ ಶೂನ್ಯ ಎನ್ನುವುದಕ್ಕೆ ಕುಮ್ಟಿಬೇರು ಸಾಕ್ಷಿಯಾಗಿದೆ.
ಯಡಮೊಗೆ ಹೋಗಲು ರಾಂಪೈಜೆಡ್ಡು ಕಮ್ಟಿಬೇರು ಜನರಿಗೆ ಕುಬ್ಜಾ ನದಿ ಕಾಲುಸಂಕವೇ ಪ್ರಮುಖ ಸಂಪರ್ಕ ಕೊಂಡಿ. ಈ ಊರು ಯಾವಾಗ ಉದಯವಾಗಿ ಜನ ವಾಸ ಮಾಡಲು ಆರಂಭಿಸಿದರೋ, ಅಂದಿನಿಂದ ಇಂದಿನವರೆಗೂ ಕಾಲುಸಂಕವೇ ಇವರ ಸೇತುವೆ. ಒಂದು ಬೆಂಕಿಪೊಟ್ಟಣ, ಹಿಡಿ ಉಪ್ಪು ಬೇಕಾದರೂ ಕಾಲುಸಂಕ ದಾಟಿಯೇ ಯಡಮೊಗೆ ಹೋಗಿ ತರಬೇಕು. ಅಥವಾ 6 ಕಿ.ಮೀ. ಪ್ರದಕ್ಷಿಣೆ ಹಾಕಿ ಮನೆಗೆ ಬೇಕಿರುವ ಅಗತ್ಯ ಸಾಮಗ್ರಿ ತರಬೇಕು. ಇಬ್ಬರು ವಯಸ್ಕರು, ಮಗುವೊಂದು ಕಾಲುಸಂಕ ದಾಟುವಾಗ ಬಿದ್ದು ಕೊಚ್ಚಿಹೋದ ಘಟನೆಯನ್ನು ಇಲ್ಲಿನ ಜನರು ಇನ್ನೂ ಮರೆತಿಲ್ಲ. ಸೊಪ್ಪು-ಸೌದೆಯನ್ನೂ ಹೊತ್ತು ಇದೇ ಸಂಕದ ಮೂಲಕವೇ ತರಬೇಕು. ಶಾಲೆಗೆ ಹೋಗುವ ಮಕ್ಕಳನ್ನು ದಾಟಿಸುವುದು ಹೆತ್ತವರಿಗೆ ದಿನವೂ ಆತಂಕದ ಕೆಲಸ. ಎಷ್ಟೇ ಕಾಳಜಿಯಿಂದ ಹೆಜ್ಜೆ ಹಾಕಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನಮ್ಮ ಈ ನೋವಿನ ಬದುಕು ಸರ್ಕಾರಕ್ಕೆ ಎಲ್ಲಿ ಅರ್ಥವಾಗಬೇಕು ಎನ್ನುತ್ತಾರೆ ಈ ಪುಟ್ಟ ಊರಿನ ಜನ.
ನಮ್ಮ ಪೂರ್ವಿಕರು ಇದೇ ಕಾಲುಸಂಕದ ಮೇಲೆ ತಿರುಗಾಡುತ್ತಿದ್ದರು. ನಾನೂ ಸಹ ನನ್ನ ಹಿಂದಿನವರು ತಿರುಗಾಡುತ್ತಿದ್ದ ಕಾಲುಸಂಕವೆಂಬ ಹೆಮ್ಮೆಯಿಂದ ತಿರುಗುತ್ತಿದ್ದು, ಇಂದು ನನ್ನ ಮಕ್ಕಳೂ ಇದೇ ಕಾಲುಸಂಕದಲ್ಲಿ ಸಂಚಾರ ಮಾಡುತ್ತಿದ್ದಾರೆ. ಹಿಂದಿನ ಶಾಸಕರಿಗೆ ಫುಟ್‌ಬ್ರಿಜ್‌ಗೆ ಮನವಿ ಮಾಡಿದ್ದು, ಸೆಂಕ್ಷನ್ ಆಗಿದೆ. ನಬಾರ್ಡ್‌ನಲ್ಲಿ ಹಣ ಇಲ್ಲ ಎಂದು ಜಾರಿಕೊಂಡರು. ಹೊಳೆಗೊಂದು ಫುಟ್‌ಬ್ರಿಜ್ ಮಾಡಿಕೊಡಲಾಗದಷ್ಟು ಸರ್ಕಾರ ಬಡವಾಗಿದೆಯಾ? -ನಾಣು ನಾಯ್ಕಹಿರಿಯ ನಾಗರಿಕ, ಕುಮ್ಟಿಬೇರು
ಪ್ರತಿದಿನ ಅಂಗನವಾಡಿ ಹಾಗೂ ಶಾಲಾ, ಕಾಲೇಜಿಗೆ ಹೋಗುವ ಮಕ್ಕಳು ಇದೇ ಸಂಕದಿಂದಲೇ ಹೋಗಿಬರಬೇಕು. ನಾವೇನು ದೊಡ್ಡ ಸೇತುವೆ ಮಾಡಿಕೊಡಿ ಎನ್ನುತ್ತಿಲ್ಲ. ಒಂದು ಫುಟ್‌ಬ್ರಿಜ್ ಮಾಡಿಕೊಡಲೂ ಆಗುವುದಿಲ್ಲವೇ? ಭದ್ರತೆಯಲ್ಲಿದ ಸಂಕ ನಂಬಿ ಯಾವ ಧೈರ್ಯದ ಮೇಲೆ ಕೃಷಿ ಬದುಕು ಕಟ್ಟಿಕೊಳ್ಳಬೇಕು? ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಕೂಡ ಬಾರದಷ್ಟು ರಸ್ತೆ ಕೆಟ್ಟದಾಗಿದೆ. -ಯೋಗೀಶ ಯಡಿಯಾಳ, ಕುಮ್ಟಿಬೇರು ನಿವಾಸಿ
ನರೇಗಾ ಯೋಜನೆಯಲ್ಲಿ ಕುಮ್ಟಿಬೇರು ಕುಬ್ಜಾ ನದಿಗೆ ಕಾಲುಸಂಕ ಮಾಡಲು ಅನುದಾನದ ಕೊರತೆಯಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಣ್ಣ ನೀರಾವರಿ ಯೋಜನೆಯಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ಸರ್ವೇ ಮಾಡಲು ಸೂಚಿಸಿದ್ದು, ಶೇ.80ರಷ್ಟು ಸರ್ವೇ ಆಗಿದೆ. ಅದರಲ್ಲಿ ಕುಮ್ಟಿಬೇರು ಕಾಲುಸಂಕವೂ ಸೇರಿದೆ. ಮುಂದಿನ ಬೇಸಿಗೆಯಲ್ಲಿ ಕುಬ್ಜಾ ನದಿ ಸಂಚಾರ ಸಮಸ್ಯೆ ಮುಕ್ತವಾಗಲಿದ್ದು, ವಿಶೇಷ ಯೋಜನೆಯಲ್ಲಿ ಕಬ್ಬಿನಾಲೆ ಕಾಲುಸಂಕ ಜಿಪಂ ಅನುದಾನದಲ್ಲಿ ಮಾಡಲಾಗುತ್ತದೆ. -ಪ್ರಸನ್ನ ಎಚ್. ಸಿಇಒ, ಉಡುಪಿ ಜಿಪಂ https://www.vijayavani.net/%e0%b2%b8%e0%b2%be%e0%b2%82%e0%b2%95%e0%b3%8d%e0%b2%b0%e0%b2%be%e0%b2%ae%e0%b2%bf%e0%b2%95-%e0%b2%b0%e0%b3%8b%e0%b2%97%e0%b2%97%e0%b2%b3-%e0%b2%a8%e0%b2%bf%e0%b2%af%e0%b2%82%e0%b2%a4%e0%b3%8d%e0%b2%b0 https://www.vijayavani.net/matthavu-couldnt-have-proper-bridge-facility