ಸಾಗರ: ತಾಲೂಕಿನ ಉಳ್ಳೂರು ಸಮೀಪ ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಅಡ್ಡ ಬಂದು ತಪ್ಪಿಸಲು ಹೋದಾಗ ಬಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆಯ ಪಕ್ಕದಲ್ಲಿ ಮಣ್ಣಿನ ದಿಬ್ಬ ಇದ್ದಿದ್ದರಿಂದ ಭಾರಿ ಅವಘಡ ತಪ್ಪಿದೆ.
ಆಯತಪ್ಪಿ ಬಿದ್ದ ಬೈಕ್ ಸವಾರ ಬಸ್ ಬೀಳುತ್ತಿದ್ದಂತೆ ಗಾಬರಿಯಾಗಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ. ಬಸ್‌ನಲ್ಲಿದ್ದ 27 ಪ್ರಯಾಣಿಕರ ಪೈಕಿ 25 ಜನರಿಗೆ ಗಾಯಗಳಾಗಿವೆ. 4 ಜನರನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದ್ದು ಅದರಲ್ಲಿ ಸಾಗರದ 6 ವರ್ಷದ ಬಾಲಕಿ ವರ್ಷ ಕೂಡ ಸೇರಿದ್ದಾಳೆ. ಬಸ್‌ಚಾಲಕ ಸಣ್ಣಪ್ಪ ಗಾಣಿಗೆರ ಅವರ ತಲೆಗೆ ಪೆಟ್ಟಾಗಿದ್ದು ನಿರ್ವಾಹಕ ಗೌಡಪ್ಪ ಅವರ ಕೈ ಮುರಿದ್ತಿದೆ. ಸಿಗಂದೂರೇಶ್ವರಿ ನರ್ಸಿಂಗ್ ಕಾಲೇಜಿನ ಸುಚಿತ್ರಾ, ಭವಿತಾ, ಜೋಸ್‌ಮಿನ್ ಅವರಿಗೆ ಸಣ್ಣಪುಟ್ಟ ಪೆಟ್ಟುಗಳಾಗಿದ್ದು, ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೋಗ ಮತ್ತು ವಿವಿಧ ಕಡೆಗಳಿಗೆ ದ್ವಿಚಕ್ರ ವಾಹನಗಳಲ್ಲಿ ಸವಾರರು ಆಗಮಿಸುತ್ತಿದ್ದು ಅವರ ಮಿತಿಮೀರಿದ ವೇಗದಿಂದ ಅವಘಡಗಳು ಸಂಭವಿಸುತ್ತಿವೆ.