ಜಿಲ್ಲೆ

ಚಾಲಕ ಕೊರತೆ ನೀಗಿಸಲು ಕ್ರಮ :ಪುತ್ತೂರು ಸಂಚಾರ ವಿಭಾಗಾಧಿಕಾರಿ ಸ್ಪಷ್ಟನೆ

ಸೌಮ್ಯ ಆರ್

ಉಪ್ಪಿನಂಗಡಿ: ಚಾಲಕರ ಕೊರತೆಯಿಂದ ಬಸ್ ಕಡಿಮೆ ಇದೆ, ಪ್ರಯಾಣಿಕರು ಸಹಕರಿಸಿ ಎಂಬ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಫಲಕ ಹಾಕಿದ ವಿಚಾರ ವೈರಲ್ ಆಗುತ್ತಿದ್ದಂತೆ ಪುತ್ತೂರು ಸಂಚಾರ ವಿಭಾಗಾಧಿಕಾರಿ ಜೈಶಾಂತ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಾಲಕ-ನಿರ್ವಾಹಕರ ಕೊರತೆಯಿಂದಾಗಿ ಬಸ್ ಸಂಚಾರ ಕಡಿತಗೊಂಡು ಜನರು ರಸ್ತೆ ಬದಿಯಲ್ಲಿ ತಾಸುಗಟ್ಟಲೆ ಕಾಯುವ ಕುರಿತು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಬಸ್ ಕೊರತೆಯಿಂದಾಗಿ ಜನ ಆಕ್ರೋಶ ಮೂಡುತ್ತಿರುವಂತೆಯೇ ಎಚ್ಚೆತ್ತ ಸರ್ಕಾರ ಚಾಲಕರ ಕೊರತೆ ನೀಗಿಸಲು ಗುತ್ತಿಗೆ ಆಧಾರದಲ್ಲಿ ನೇಮಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ನೇಮಕಾತಿಯಾಗಿದ್ದ ಚಾಲಕರ ಗುತ್ತಿಗೆ ಅವಧಿ ಪೂರ್ಣಗೊಂಡ ಕಾರಣದಿಂದಾಗಿ ಚಾಲಕರೆಲ್ಲರೂ ನಿರ್ಗಮಿಸಿದ್ದರು. ಇದರಿಂದಾಗಿ ಪುತ್ತೂರು ವಿಭಾಗದಲ್ಲಿ 170 ಚಾಲಕರ ಕೊರತೆ ಕಾಡಿತ್ತು. ಈ ಮಧ್ಯೆ ಇಲಾಖೆಯ ಕಾಯಂ ಸಿಬ್ಬಂದಿ ನೆಲೆಯಲ್ಲಿ ಚಾಲಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದ ನಡುವೆ ಸರ್ಕಾರ ಕೊರತೆಯಲ್ಲಿದ್ದ 170 ಚಾಲಕರ ಪೈಕಿ 110 ಚಾಲಕರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಉಳಿದ 60 ಚಾಲಕರನ್ನು ಒದಗಿಸಿದರೆ ಪ್ರಯಾಣಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುವುದೆಂದು ಜೈಶಾಂತ್ ಕುಮಾರ್ ತಿಳಿಸಿದ್ದಾರೆ.