ಮಡಿಕೇರಿ: ಮಡಿಕೇರಿಯಿಂದ ಕೊಡಗಿನ ಗಡಿ ಗ್ರಾಮ ಕರಿಕೆ-ಕಾಂಞ್ಞಂಗಾಡುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕರಿಕೆ ಗ್ರಾಮಸ್ಥರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರಿಗೆ ಶನಿವಾರ ಮನವಿ ಸಲ್ಲಿಸಿದ ಗ್ರಾಮಸ್ಥರು, ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಸ್ಥಳೀಯ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥ ಕೆ.ಬಿ.ರಾಜೇಶ್, ಮಡಿಕೇರಿಯಿಂದ ಕರಿಕೆ-ಕಾಂಞ್ಞಂಗಾಡುವಿಗೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗ್ರಾಮಸ್ಥರು ಜಿಲ್ಲಾ ಕೇಂದ್ರ ಮತ್ತು ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಪರದಾಡುವಂತಾಗಿದೆ ಎಂದರು.
ಮಡಿಕೇರಿಯಿಂದ ಕರಿಕೆ-ಕಾಂಞ್ಞಂಗಾಡುವಿಗೆ ಹಿಂದೆ ಒಂದು ಖಾಸಗಿ ಬಸ್ಸು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಸ್‌ನ್ನು ಕಾರಣಾಂತರಗಳಿಂದ ನಿಲುಗಡೆಗೊಳಿಸಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಬಸ್ ಸೌಲಭ್ಯ ಇಲ್ಲದೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಂಕಷ್ಟಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿಯಿಂದ ಬೆಳಗ್ಗೆ ೭ ಗಂಟೆಗೆ ಹೊರಟು, ೭.೩೦ಕ್ಕೆ ಮೂರ್ನಾಡು ತಲುಪಿ, ನಾಪೋಕ್ಲುವಿಗೆ ೮ ಗಂಟೆಗೆ, ಭಾಗಮಂಡಲಕ್ಕೆ ೮.೪೦ ಗಂಟೆಗೆ, ಕರಿಕೆ ೯.೫೦ಕ್ಕೆ, ಪಾಣತ್ತೂರಿಗೆ ೧೧.೫ ಗಂಟೆಗೆ ತಲುಪುವಂತೆ, ಮತ್ತೆ ಆದೇ ಮಾರ್ಗವಾಗಿ ಕಾಂಞ್ಞಂಗಾಡುವಿನಿಂದ ೧.೧೫ಕ್ಕೆ ಬಿಟ್ಟು ಪಾಣತ್ತೂರು ೨.೪೫, ಚೆತ್ತುಕಾಯ ೩.೧೫ ಗಂಟೆಗೆ, ಭಾಗಮಂಡಲ ೪.೫೦ ಗಂಟೆಗೆ, ನಾಪೋಕ್ಲು ೫ ಗಂಟೆಗೆ, ಮೂರ್ನಾಡು ೫.೩೦ ಗಂಟೆಗೆ, ಮಡಿಕೇರಿಗೆ ೬.೪೦ ಕ್ಕೆ ತಲುಪುವಂತೆ ತಕ್ಷಣವೇ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.
ನಂತರ ಗ್ರಾಮಸ್ಥರು ಶಾಸಕ ಕೆ.ಜಿ.ಬೋಪಯ್ಯ ಹಾಗೂ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ವ್ಯವಸ್ಥಾಪಕರನ್ನು ಭೇಟಿಯಾಗಿ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥ ಎಂ.ಕೆ.ಕೃಷ್ಣ ಇದ್ದರು.