ಜಿಲ್ಲೆ

ಮೇಲ್‌ಬಂಡಿಮಠದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ಲಿಸಿ

ಇಂದಿರಾ ಎನ್ ಕೆ

ನರೇಂದ್ರ ಎಸ್. ಮರಸಣಿಗೆ ಹೆಬ್ರಿ ಹೆಬ್ರಿಯ ಸೀತಾನದಿ ಮೇಲ್‌ಬಂಡಿಮಠ ಎಂಬಲ್ಲಿ ಬಸ್ ನಿಲುಗಡೆಗೆ ಅಧಿಕೃತ ಸ್ಥಳವಿದ್ದರೂ ಕೆಎಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆಗೊಳಿಸದೇ ಸಂಚರಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕೆಲಸಕ್ಕೆ ತೆರಳುವವರು ಸಹಿತ ಪ್ರಯಾಣಿಕರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಸೀತಾನದಿ ಮೇಲ್‌ಬಂಡಿಮಠ ಭಾಗದಲ್ಲಿ ಮೊದಲಿನಿಂದಲೂ ಬಸ್ ನಿಲುಗಡೆ ಮಾಡದಿರುವುದು, ಅಸಮರ್ಪಕ ಸಮಯ ಪಾಲನೆ ಇದ್ದು, ತುರ್ತಾಗಿ ತೆರಳಬೇಕಿರುವವರು, ಬಸ್ಸನ್ನೇ ಅವಲಂಬಿಸಿದವರು ಪ್ರತಿ ಬಾರಿಯೂ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಭಾಗದಲ್ಲಿ ಖಾಸಗಿ ಬಸ್‌ಗಳ ಸಂಚಾರವೂ ಇಲ್ಲವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯತ್ತ ಗಮನ ಹರಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಒಂದೆರಡು ಬಸ್‌ಗಳು ನಿಲುಗಡೆಗೊಳಿಸುತ್ತವೆ ಹೊರತು ಉಳಿದ ಬಸ್‌ಗಳು ಈ ಭಾಗದಲ್ಲಿ ಸ್ಟಾಪ್ ನೀಡುವುದಿಲ್ಲ. ತಾಲೂಕು ಹಾಗೂ ಜಿಲ್ಲಾಮಟ್ಟದ ಜನಪ್ರತಿನಿಧಿಗಳಿಗೆ, ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾದರೂ ಮೇಲ್‌ಬಂಡಿಮಠ ಭಾಗದಲ್ಲಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ನೀಡಲೇಬೇಕು. ಈ ಕುರಿತು ಅಧಿಕಾರಿಗಳು ಬಸ್ ಚಾಲಕರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಕ್ತಿ ಯೋಜನೆಯಿಂದ ವಂಚಿತ

ಸೀತಾನದಿ ಮೇಲ್ ಬಂಡಿಮಠ ಭಾಗದಿಂದ ಹೆಬ್ರಿಯ ತನಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಲಿ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದು, ಬಹಳಷ್ಟು ಮಹಿಳಾ ಪ್ರಯಾಣಿಕರು ಆರ್ಥಿಕವಾಗಿ ಅಶಕ್ತರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಈ ಭಾಗದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಬಸ್‌ನ ನಿಲುಗಡೆ ರಹಿತ ಸಂಚಾರದಿಂದ ಮಹಿಳಾ ಕಾರ್ಮಿಕರು ಶಕ್ತಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಮಹಿಳಾ ಕಾರ್ಮಿಕರು ಟೆಂಪೊ, ರಿಕ್ಷಾ ಮೂಲಕ ಕೆಲಸಕ್ಕೆ ತೆರಳುವ ಪರಿಸ್ಥಿತಿಯಿದೆ.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿಂದ ಹೆಬ್ರಿಯ ಶಾಲೆಗೆ ತೆರಳುತ್ತಾರೆ. ಈ ಭಾಗದ ಹೆಣ್ಣು ಮಕ್ಕಳು ಶಕ್ತಿ ಯೋಜನೆ ಫಲಾನುಭವಿಗಳಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಪ್ರಯೋಜನ ಮಾತ್ರ ಶೂನ್ಯ. ಇನ್ನಾದರೂ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಬಸ್‌ಗಳ ಸಂಖ್ಯೆ ಹೆಚ್ಚಿಸಿದರೆ ಇನ್ನೂ ಅನುಕೂಲ. ವಿಜಯ ಶೆಟ್ಟಿ, ಸ್ಥಳೀಯರು ಮೇಲ್ ಬಂಡಿಮಠ ಭಾಗದ ಬೇಡಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ, ಬಸ್ ನಿಲುಗಡೆ ಬಗ್ಗೆ ಸೂಕ್ತ ಕ್ರಮ ವಹಿಸುತ್ತೇನೆ. ಸಾರ್ವಜನಿಕರು ಸಹಕಾರ ನೀಡಿದರೆ ನಿರ್ದಿಷ್ಟ ಸ್ಥಳದಲ್ಲಿ ಬಸ್ ನಿಲ್ಲಿಸಲು ಚಾಲಕ, ನಿರ್ವಾಹಕರಿಗೆ ತಾಕಿತ್ತು ವಾಡುತ್ತೇನೆ. ರಾಜೇಶ್ ಶೆಟ್ಟಿ, ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಕ, ಮಂಗಳೂರು https://www.vijayavani.net/kodi-sanjeevini-union-general-assembly-new-president-elected https://www.vijayavani.net/textbook-distribution-at-veerabhadra-temple