ಬೆಳ್ತಂಗಡಿ: ವಿದ್ಯಾರ್ಥಿಗಳನ್ನು ಬಸ್ ನಿರ್ವಾಹಕ ಬಸ್‌ನ ಒಳಗೆ ದೂಡಿ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರು ಬಸ್ ಅನ್ನು ಶನಿವಾರ ಚಾರ್ಮಾಡಿ ಬಳಿ ತಡೆದು ಗಲಾಟೆ ನಡೆಸಿದರು.
ಮಂಗಳೂರಿನಿಂದ ಮೂಡಿಗೆರೆಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ಗೆ ಉಜಿರೆಯಲ್ಲಿ ಹತ್ತುವ ವೇಳೆ ನಿರ್ವಾಹಕ ದೂಡಿ ಹಲ್ಲೆ ನಡೆಸಿರುವುದಾಗಿ ವಿದ್ಯಾರ್ಥಿಗಳು ನಿರ್ವಾಹಕನ ಜತೆ ಗಲಾಟೆ ನಡೆಸಿದ್ದಾರೆ. ಬಳಿಕ ಬಸ್ ಚಾರ್ಮಾಡಿ ಚೆಕ್‌ಪೋಸ್ಟ್‌ಗೆ ತಲುಪಿದಾಗ ಅಲ್ಲಿ ಸ್ಥಳೀಯರು ಜಮಾಯಿಸಿ ಬಸ್ ಅನ್ನು ತಡೆದು ಗಲಾಟೆ ನಡೆಸಿದ್ದಾರೆ. ಈ ವೇಳೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ವಿದ್ಯಾರ್ಥಿಗಳು ಮತ್ತು ಸ್ಥಳೀಯರಲ್ಲಿ ಮಾತನಾಡಿದ್ದು ಅವರಿಗೂ ತಂಡ ಹಲ್ಲೆ ನಡೆಸಲು ಮುಂದಾಯಿತು. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧರ್ಮಸ್ಥಳ ಪಿಎಸ್‌ಐ ಅನಿಲ್ ಕುಮಾರ್ ಮತ್ತು ತಂಡದವರು ಸ್ಥಳಕ್ಕೆ ಆಗಮಿಸಿ ಬಸ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಜತೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸುಮಾರು 70ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಬಸ್ ಚಾರ್ಮಾಡಿಯಿಂದ ಒಂದೂವರೆ ಗಂಟೆ ತಡವಾಗಿ ಮೂಡಿಗೆರೆಯತ್ತ ಪ್ರಯಾಣ ಬೆಳೆಸಿತು. ಭಾನುವಾರ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.