ಉಡುಪಿ: ನಗರದ ಬನ್ನಂಜೆಯಲ್ಲಿ 2018ರಲ್ಲಿ ಶಿಲಾನ್ಯಾಸಗೊಂಡು ಎರಡು ವರ್ಷದ ಒಳಗೆ ಮುಗಿಯಬೇಕಿದ್ದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಕೋವಿಡ್ ಲಾಕ್‌ಡೌನ್‌ನಿಂದ ವಿಳಂಬವಾಗಿದೆ.
ಪ್ರಸಕ್ತ ಕೋವಿಡ್ ಮಾರ್ಗಸೂಚಿ ಪ್ರಕಾರ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಕಟ್ಟಡ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. ಬಸ್ ನಿಲ್ದಾಣದ ಕೆಲಸ ಮುಕ್ತಾಯ ಹಂತದಲ್ಲಿದ್ದು, ಅಕ್ಟೋಬರ್‌ಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಗರದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರತಿನಿತ್ಯ 400 ರಿಂದ 500 ಬಸ್‌ಗಳು ಕಾರ್ಯಾಚರಿಸುತ್ತಿವೆ. ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯಪುರ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರತಿನಿತ್ಯ ಬಸ್ಸುಗಳು ಓಡಾಡುತ್ತವೆ. ಈ ಜಾಗ ಇಕ್ಕಟ್ಟಾಗಿದ್ದು, ಬಸ್‌ಗಳ ನಿಲಗಡೆಗೆ, ಪ್ರಯಾಣಿಕರ ವಿಶ್ರಾಂತಿ ಹಾಗೂ ಪಾರ್ಕಿಂಗ್‌ಗೆ ಜಾಗದ ಸಮಸ್ಯೆ ಇದೆ.
ಸಾಕಷ್ಟುಮಂದಿ ಪ್ರವಾಸಿಗರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು ಜಿಲ್ಲೆಯ ಪ್ರಮುಖ ಬಸ್ ನಿಲ್ದಾಣವನ್ನು ಆಶ್ರಯಿಸಿ ಪ್ರಯಾಣ ಮಾಡಬೇಕಿದೆ. ಆದರೆ ಈಗಿರುವ ಬಸ್ ನಿಲ್ದಾಣ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಗರಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಕೊರತೆ ನೀಗಿಸುವ ನಿಟ್ಟಿನಲ್ಲಿ ಬನ್ನಂಜೆ ನಾರಾಯಣಗುರು ಸಭಾಭವನದ ಸರ್ಕಲ್ ಮುಂಭಾಗದ 2.5 ಎಕರೆ ಪ್ರದೇಶದಲ್ಲಿ 2018ರಲ್ಲಿ 31.34 ಕೋಟಿ ರೂ. ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. 2020ರಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದ್ದರೂ ಕೋವಿಡ್ ಲಾಕ್‌ಡೌನ್, ಕಾರ್ಮಿಕರ ಸಮಸ್ಯೆ, ಕಟ್ಟಡ ಸಾಮಗ್ರಿ ಪೂರೈಕೆ ವಿಳಂಬ ಮೊದಲಾದ ಕಾರಣಗಳಿಂದ ಇನ್ನೂ ಪೂರ್ಣಗೊಂಡಿಲ್ಲ. ಪ್ರಸ್ತುತ ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲ್ಟಿಪ್ಲೆಕ್ಸ್ ಚಿತ್ರಮಂದಿರವಿಲ್ಲ
30,000 ಚದರ ಅಡಿಯ 4 ಅಂತಸ್ತುಗಳ ಬೃಹತ್ ಕಟ್ಟಡ ಇದಾಗಿದೆ. ಇದರಲ್ಲಿ ಬೃಹತ್ ಮಲ್ಟಿಫ್ಲೆಕ್ಸ್ ಚಿತ್ರ ಮಂದಿರ ತೆರೆಯುವ ಯೋಜನೆ ರೂಪಿಸಲಾಗಿತ್ತು. ಬಳಿಕ ಈ ಯೋಜನೆಯನ್ನು ಕೈ ಬಿಡಲಾಗಿದೆ. ಕೆಳ ಅಂತಸ್ತಿನಲ್ಲಿ 50ಕ್ಕೂ ಅಧಿಕ ಕಾರುಗಳು ನಿಲುಗಡೆ ಮಾಡುವಷ್ಟು ವಿಶಾಲವಾಗಿದೆ. ಮೇಲಿನ ಅಂತಸ್ತಿನಲ್ಲಿ ಏಕಕಾಲಕ್ಕೆ 18 ಬಸ್ ನಿಲುಗಡೆಗೆ, 100 ದ್ವಿಚಕ್ರ ವಾಹನ ನಿಲ್ಲಿಸುವಷ್ಟು ಸ್ಥಳಾವಕಾಶವಿದೆ. ಉಳಿದ ಮಹಡಿಯಲ್ಲಿ ಕಚೇರಿ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಜತೆಗೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ.
ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಕೋವಿಡ್ ಲಾಕ್‌ಡೌನ್‌ನಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ಸದ್ಯ ಕೋವಿಡ್‌ಮಾರ್ಗಸೂಚಿ ಪಾಲಿಸಿ ಕಾಮಗಾರಿ ನಡೆಸಲಾಗುತ್ತಿದೆ. ಕಟ್ಟಡದ ಒಳಾಂಗಣ ವಿನ್ಯಾಸ, ನೆಲಹಾಸು ಕೆಲಸ ಸಾಗುತ್ತಿದೆ.
ಅರುಣ್ ಎಸ್.ಎನ್.
ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು