ಜಿಲ್ಲೆ

ಕೆಎ12 ನೋಂದಣಿಯ ಕೆಎಸ್‌ಆರ್‌ಟಿಸಿ ಬಸ್ ಸಂಚಾರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಇದೇ ಮೊದಲ ಬಾರಿಗೆ ಮಡಿಕೇರಿ ಆರ್‌ಟಿಒ ನೋಂದಣಿ ಸಂಖ್ಯೆ (ಕೆಎ-12) ಹೊಂದಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಗುರುವಾರ ಚಾಲನೆ ನೀಡಿದರು. ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ 5 ಬಸ್‌ಗಳಿಗೆ ಡಾ. ಮಂತರ್ ಗೌಡ ಪೂಜೆ ಸಲ್ಲಿಸಿ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ಮಾತನಾಡಿದ ಅವರು ಮಡಿಕೇರಿ ಡಿಪೋದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದರೂ ಇವೆಲ್ಲಾ ಪುತ್ತೂರು ವಿಭಾಗಕ್ಕೆ ಸೇರಿದ್ದರಿಂದ ಕೆಎ19 ನೋಂದಣಿ ಸಂಖ್ಯೆ ಇರುತ್ತಿದ್ದವು. ಇದೀಗ ಮಡಿಕೇರಿಯ ಗುರುತು ಹೇಳಲು ಮೊದಲ ಬಾರಿಗೆ ಮಡಿಕೇರಿ ಆರ್‌ಟಿಒದ ಕೆಎ12 ನೋಂದಣಿ ಸಂಖ್ಯೆ ಅಳವಡಿಸಲಾಗುತ್ತಿದೆ. ಇನ್ನು ಮುಂದೆ ಮಡಿಕೇರಿ ಡಿಪೋಕ್ಕೆ ಬರುವ ಎಲ್ಲಾ ಹೊಸ ಬಸ್‌ಗಳು ಕೆಎ12 ಆಗಿರುತ್ತದೆ. ಈ ಹೊಸ ಬಸ್‌ಗಳು ಮೊದಲು ದಸರಾ ವಿಶೇಷ ಬಸ್‌ಗಳಾಗಿ ಸಂಚರಿಸಲಿವೆ. ದಸರಾ ಮುಗಿದ ನಂತರ ದೊಡ್ಡ ಮಾರ್ಗದಲ್ಲಿ ಓಡಿಸಲಾಗುತ್ತದೆ. ಈ ಬಸ್‌ಗಳಿಂದ ಶಕ್ತಿ ಯೋಜನೆಯ ಫಲಾನುಭವಿಗಳಿಗೂ ಅನುಕೂಲ ಆಗಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಟಿ.ಪಿ. ರಮೇಶ್, ರಾಜೇಶ್ ಯಲ್ಲಪ್ಪ, ಪ್ರಕಾಶ್ ಆಚಾರ್ಯ, ಚುಮ್ಮಿದೇವಯ್ಯ, ಚಂದ್ರಶೇಖರ್, ಡಿಪೋ ವ್ಯವಸ್ಥಾಪಕ ಮೆಹಬೂಬ ಅಲಿ ಮತ್ತಿತರರು ಇದ್ದರು.