ಜಿಲ್ಲೆ

ಪ್ರತೀ ಗ್ರಾಮಕ್ಕೆ ಬರಲಿದೆ ಕೆಎಸ್‌ಆರ್‌ಟಿಸಿ!

ಪುತ್ತೂರು : ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯದ ಗ್ರಾಮೀಣ ಭಾಗವನ್ನು ಸಂಪರ್ಕಿಸಲು ನೆರವಾಗುವ ಗ್ರಾಮೀಣ ರಸ್ತೆ ಅಭಿವೃದ್ದಿ ಕಾರ್ಯ ಭರದಿಂದ ಸಾಗುತ್ತಿದ್ದಂತೆ ರಾಷ್ಟ್ರೀಕೃತ ಮಾರ್ಗಸೂಚಿಗಳಲ್ಲಿ ಸಾರಿಗೆ ಸೌಲಭ್ಯದ ಅಭಿವೃದ್ಧಿಯ ದೃಷ್ಠಿಯಿಂದ ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕ ಆರಂಭಿಸುವ ಮಹತ್ತರ ಯೋಜನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೈಹಾಕಿದೆ. ಈ ಯೋಜನೆಯಂತೆ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರಿನ ಪ್ರತೀ ಗ್ರಾಮಕ್ಕೆ ಬರಲಿದೆ ಕೆಎಸ್‌ಆರ್‌ಟಿಸಿ!

ಪ್ರತೀ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿಯ ಎರಡನೇ ಘಟಕ ಆರಂಭಿಸುವ ಯೋಜನೆ ಪುತ್ತೂರು ಶಾಸಕ ಸಂಜೀವ ಮಠಂದೂರು ರೂಪಿಸಿದ್ದು, ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ 1.5 ಎಕರೆ ಸರ್ಕಾರಿ ನಿವೇಶನ ಮಂಜೂರು ಮಾಡಲು ಕಂದಾಯ ಇಲಾಖೆಗೆ ಸೂಚಿಸಿದ್ದಾರೆ.

ಗ್ರಾಮಕ್ಕೆ ಬರಲಿದೆ ಕೆಎಸ್‌ಆರ್‌ಟಿಸಿ: ಗ್ರಾಮಾಂತರ ಭಾಗವನ್ನೇ ಕೆಂದ್ರವಾಗಿರಿಸಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯ ಅಧೀನದಲ್ಲಿ 5 ಕೆಎಸ್‌ಆರ್‌ಟಿಸಿ ಡಿಪ್ಪೋ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಹೊಸ ರೋಟ್‌ನಲ್ಲಿ ಬಸ್ ಸಂಚಾರ ಅಸಾಧ್ಯ. ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕ ಆರಂಭವಾದರೆ ಹೆಚ್ಚುವರಿ ಬಸ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಬಸ್ ನಿರ್ವಹಣಾ ಕೇಂದ್ರ, ಉಪ ಆಡಳಿತ ವ್ಯವಸ್ಥೆ ಇರಲಿದೆ. ಈ ಮೂಲಕ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರಿನ ಅಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಅಥವಾ ಹೊಸ ರೋಟ್‌ಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ನೆರವಾಗಲಿದೆ. ಈಗಾಗಲೇ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ಗ್ರಾಮೀಣ ರಸ್ತೆ ಅಭಿವೃದ್ದಿ ಹೊಂದುತ್ತಿದು, ಭವಿಷ್ಯದಲ್ಲಿ ಪ್ರತೀ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಸಾರಿಗೆ ವ್ಯವಸ್ಥೆ ಇರಲಿದೆ.

ನೂತನ ಸಂಚಾರಿ ಸೇವೆ ಲಭ್ಯದ.ಕ ಜಿಲ್ಲೆಯಲ್ಲಿ ಮಂಗಳೂರು ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಗಳಿದ್ದು, ಐದೈದು ಡಿಪ್ಪೋಗಲಾಗಿ ವಿಭಾಗಿಸಲಾಗಿದೆ. ಮಂಗಳೂರು ವಿಭಾಗದಲ್ಲಿ ಮಂಗಳೂರು 1, 2, 3, ಕುಂದಾಪುರ, ಉಡುಪಿ ಕೆಎಸ್‌ಆರ್‌ಟಿಸಿ ಡಿಪ್ಪೋ ಇದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಧರ್ಮಸ್ಥಳ, ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪ್ಪೋ ಇದೆ. ಇದೆಲ್ಲವುಗಳನ್ನು ಒಟ್ಟು ಸೇರಿಸಿ ಆರ್ಥಿಕ ಹೊಂದಾಣಿಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ರೋಟ್ ಬಸ್ ಸಂಚಾರ ವ್ಯವಸ್ಥೆ ಇದೆ. ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕ ಆರಂಭವಾದರೆ ಈಗಾಗಲೇ ಅಭಿವೃದ್ದಿಹೊಂದಿರುವ ಹಾಗೂ ಮುಂದೆ ಅಭಿವೃದ್ದಿಗೊಳ್ಳಲಿರುವ ಗ್ರಾಮಾಂತರ ಭಾಗದ ರಸ್ತೆಗಳ ಮೂಲಕ ನೂತನವಾಗಿ ಸಾರ್ವಜನಿಕ ಸಂಚಾರಿ ಸೇವೆ ಲಭ್ಯವಾಗಲಿದೆ.

ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಎರಡನೇ ಘಟಕಕ್ಕೆ 2 ನಿವೇಶನಗಳನ್ನು ಗುರುತಿಸಲಾಗಿದ್ದು, ಕಂದಾಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಈಗಾಗಲೇ ಪುತ್ತೂರು ಕೆಎಸ್‌ಆರ್‌ಟಿಸಿಯ ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರೊಂದಿಗೆ ಚರ್ಚೆ ನಡೆಸಿದ್ದೇನೆ. ಕೆಎಸ್‌ಆರ್‌ಟಿಸಿಯ ಅಧ್ಯಕ್ಷ ಹಾಗೂ ಶಾಸಕ ಹೊಳಲ್ಕೆರೆ ಚಂದ್ರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರೊಂದಿಗೆ ಮಾತುಕತೆ ನಡೆಸಿ ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿಯ ಎರಡನೇ ಘಟಕವನ್ನು ಆರಂಭಿಸುವ ಕುರಿತು ತ್ವರಿತ ಕ್ರಮ ಕೈಗೊಳ್ಳಲಾಗಿದೆ. ಸಂಜೀವ ಮಠಂದೂರು, ಪುತ್ತೂರು ಶಾಸಕ