ಬಾಗಲಕೋಟೆ: ಕೆಸರುಗದ್ದೆಯಂತಾಗಿದ್ದ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ ಬಸ್ ಸಿಲುಕಿಕೊಂಡ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಬಸ್ಸು ಕೆಸರಿನಿಂದ ಹೊರಬಾರದ ಪರಿಣಾಮ ಪ್ರಯಾಣಿಕರು ಮಾರ್ಗಮಧ್ಯದಲ್ಲಿ ಪರದಾಡುವಂತಾಯಿತು.
ಇಳಕಲ್ ಡಿಪೋ ಬಸ್ಸು, ಇಳಕಲ್ ನಗರದಿಂದ ತೊಂಡಿಹಾಳ ಮಾರ್ಗವಾಗಿ ಅಂಕನಾಳಗೆ ಹೋಗುತ್ತಿತ್ತು. ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜಿಟಿಜಿಟಿ ಮಳೆಯಿಂದಾಗಿ ಕೆಸರುಗದ್ದೆಯಂತಾಗಿರುವ ಇಳಕಲ್ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿತು. ಬಸ್ಸನ್ನು ಕೆಸರಿನಿಂದ ಹೊರಕ್ಕೆ ತರಲು ಚಾಲಕ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಕಾರಣದಿಂದ ಪ್ರಯಾಣಿಕರು ಬಸ್ ಇಳಿದು ಬೇರೆ ಬೇರೆ ವಾಹನಗಳ ಮೂಲಕ ತಮ್ಮ ಸ್ಥಾನಗಳಿಗೆ ತೆರಳಿದರು.