ಜಿಲ್ಲೆ

ಪ್ರಯಾಣಿಕನ ಎದೆಗೆ ಸಿನಿಮಾ ಸ್ಟೈಲಿನಲ್ಲಿ ಒದ್ದ ಕೆಎಸ್ಸಾರ್ಟಿಸಿ ಕಂಡಕ್ಟರ್!

Dakshina Kannada

ಈಶ್ವರಮಂಗಲ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕರೊಬ್ಬರು ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ ಅಮಾನವೀಯ ಕೃತ್ಯ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ.

ಈಶ್ವರಮಂಗಲ ಪೇಟೆಯ ಜಂಕ್ಷನ್‌ನಲ್ಲಿ ಘಟನೆ ನಡೆದಿದೆ. ಕೆಎ 21 ಎಫ್ 0002 ನಂಬರ್‌ನ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಕಾಲಿನಿಂದ ತುಳಿದು ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾನಮತ್ತನಾಗಿ ಬಸ್ ಏರಿದ್ದ ಕೃಷ್ಣಪ್ಪ ಎಂಬಾತನನ್ನು ಬಸ್ಸಿನ ನಿರ್ವಾಹಕ ತಡೆದು ಅವರ ಕೊಡೆಯನ್ನು ರಸ್ತೆಗೆ ಎಸೆದು ಆತನನ್ನು ಬಸ್‌ನಿಂದ ಕೆಳಗಿಳಿಸಲು ಕೈಯಿಂದ ಹೊಡೆದು ಹಲ್ಲೆ ನಡೆಸಿ ಕೊನೆಗೆ ಕಾಲಿನಿಂದ ಎದೆಗೆ ತುಳಿದು ರಸ್ತೆಗೆ ದೂಡಿ ಹಾಕಿದ್ದಾನೆ. ರಸ್ತೆಗೆ ಬಿದ್ದ ಆತನನ್ನು ಅಲ್ಲಿಯೇ ಬಿಟ್ಟು ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗುವ ವಿಡಿಯೋ ವೈರಲ್ ಆಗುತ್ತಿದೆ.

*ನಿರ್ವಾಹಕನ ಅಮಾನತು:
ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ನಿರ್ವಾಹಕರಿಗಿಲ್ಲ. ಮೇಲ್ನೋಟಕ್ಕೆ ನಿರ್ವಾಹಕ ಮಾಡಿರುವ ಕೃತ್ಯ ತಪ್ಪು ಎಂದು ಕಾಣುತ್ತಿದೆ. ಹೀಗಾಗಿ ನಿರ್ವಾಹಕನ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಆತನನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.