ಹಾವೇರಿ: ಇಲ್ಲಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮತಪಟ್ಟಿದ್ದಾರೆ.
ಹರಪನಹಳ್ಳಿ ತಾಲೂಕು ಅರಸನಾಳ ಗ್ರಾಮದ ನೀಲವ್ವ ಹನುಮಂತಪ್ಪ ಬಂಗೇರ (34) ಮೃತ ಮಹಿಳೆ. ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಬಸ್ ಚಾಲಕ ಶ್ರೀಮಂತ ನಿಂಗಪ್ಪ ಮಾಳಾ (46) ಬಸ್ ಡಿಕ್ಕಿ ಪಡಿಸಿದ ಆರೋಪಿ.
ಈತ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿದ್ದ ನೀಲವ್ವಳಿಗೆ ಬಸ್ ಡಿಕ್ಕಿ ಪಡಿಸಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ನೀಲವ್ವಳನ್ನು ಚಿಕಿತ್ಸೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಇಲ್ಲಿಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.