ಪ್ರಕಾಶ್ ಮಂಜೇಶ್ವರ, ಮಂಗಳೂರು
ಕರ್ನಾಟಕ ಪ್ರದೇಶ ಸಾರಿಗೆ ಸಮಗ್ರ ರಾಷ್ಟ್ರೀಕರಣ(ಕಂಪ್ರೆನ್ಸಿವ್ ಏರಿಯಾ ಸ್ಕೀಮ್) ಯೋಜನೆ 2019ರ ಮಾರ್ಚ್ 7ರಂದು ಜಾರಿಗೆ ತರುವ ಮೂಲಕ ರಾಜ್ಯದ ರಸ್ತೆಗಳಲ್ಲಿ ಕೆಎಸ್‌ಆರ್‌ಟಿಸಿ ಏಕಸ್ವಾಮ್ಯ ಹೊಂದಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಶೇ.20 ಮಾತ್ರ.
ರಾಜ್ಯದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಅನುಷ್ಠಾನ ಬಳಿಕ ಜಿಲ್ಲೆಯಲ್ಲಿ ನಿಗಮದ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಜಿಲ್ಲಾಡಳಿತ ಬಸ್ ಸಂಖ್ಯೆ ಹೆಚ್ಚಿಸಲು ಅನುಮತಿ ನೀಡುತ್ತಿಲ್ಲ. ಮಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯದೆ ವರ್ಷವೇ ಕಳೆಯಿತು. ವಿಶೇಷ ಸಂದರ್ಭಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಂತದಲ್ಲಿಯೇ ಒದಗಿಸಬಹುದಾದ ತಾತ್ಕಾಲಿಕ ಪರವಾನಗಿಯೂ (ಟಿಪಿ) ದೊರೆಯುತ್ತಿಲ್ಲ.
ಡಿಎಂ ನೋಟಿಫಿಕೇಶನ್ ನೆವ
ವಾಹನ ದಟ್ಟಣೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ 1993ರ ಏಪ್ರಿಲ್ 6ರಂದು ಹೊಸ ಬಸ್ ಪರವಾನಗಿ ನಿರ್ಬಂಧಿಸಿ ಉಭಯ ಜಿಲ್ಲೆಗಳ ದಂಡಾಧಿಕಾರಿಗಳು (ಜಿಲ್ಲಾಧಿಕಾರಿ) ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ಪ್ರಕಾರ ಮಂಗಳೂರಿನಲ್ಲಿ ಇರುವ ಕೊಟ್ಟಾರ ಕ್ರಾಸ್, ಕೆಪಿಟಿ, ಮಲ್ಲಿಕಟ್ಟೆ, ಕಂಕನಾಡಿ ಪ್ರದೇಶಗಳನ್ನು ದಾಟಿ ಬಸ್‌ಗಳು ನಗರ ಪ್ರವೇಶಿಸಲು, ಹೊಸ ಪರವಾನಗಿ ಒದಗಿಸಲು ಅವಕಾಶವಿಲ್ಲ. ಈಗಾಗಲೇ ಇರುವ ಬಸ್‌ಗಳ ಸಂಚಾರಕ್ಕೆ ಸಮಸ್ಯೆ ಇಲ್ಲ. ಪ್ರಸ್ತಾವಿತ ಅಧಿಸೂಚನೆ ಬಳಿಕ ನಗರದ ಪ್ರಮುಖ ರಸ್ತೆಗಳು ಅಗಲಗೊಂಡಿವೆ. ನಗರದಲ್ಲಿ ಅಧಿಕ ಜನರು ಸಂದರ್ಶಿಸುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಗರದ ಹೊರವಲಯಕ್ಕೆ ಹೋಗಲು ಸಜ್ಜಾಗುತ್ತಿದೆ. ಕಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಓಡಾಡುತ್ತಿವೆ. ಆದರೆ ಅಧಿಸೂಚನೆಯ ನೆಪವೊಡ್ಡಿ ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳನ್ನು ಆರಂಭಿಸಲು ಅಡ್ಡಿಪಡಿಸಲಾಗುತ್ತಿದೆ. ಅಂತರ್ ಜಿಲ್ಲಾ ಬಸ್‌ಗಳು ಮಂಗಳೂರು ಬಿಜೈ ಬಸ್ ನಿಲ್ದಾಣ ಪ್ರವೇಶಿಸಬಹುದು, ಮಂಗಳೂರು ನಗರ ಸಾರಿಗೆಗೂ ಇದು ಅವಶ್ಯ.