ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ: 140ರಷ್ಟು ಬಸ್ ಬೆರಳೆಣಿಕೆ ಪ್ರಯಾಣಿಕರೊಂದಿಗೆ ಓಡಾಟ

Dakshina Kannada

ಮಂಗಳೂರು/ಪುತ್ತೂರು: ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಸುಮಾರು 140 ಬಸ್‌ಗಳು ಮಧ್ಯಾಹ್ನದವರೆಗೆ ಸಂಚಾರ ನಡೆಸಿದವು. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರೂ ಮಂಗಳೂರು ನಗರದಲ್ಲಿ ಖಾಸಗಿ ಬಸ್ ರಸ್ತೆಗಿಳಿದಿಲ್ಲ. ಆದರೆ, ಕೆಎಸ್‌ಆರ್‌ಟಿಸಿಯ ಮಂಗಳೂರು ನಗರದ ಮೂರು ಡಿಪೊಗಳಿಂದ ಸುಮಾರು 56 ಸಹಿತ ಮಂಗಳೂರು ವಿಭಾಗ (ಉಡುಪಿ ಸಹಿತ)ದಿಂದ ಒಟ್ಟು 102ರಷ್ಟು ಬಸ್‌ಗಳು ಸಂಚರಿಸಿವೆ. ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್‌ಗಳು ಮಧ್ಯಾಹ್ನ 1ರ ವರೆಗೆ ಓಡಾಡಿದ್ದರೆ, ಅಂತರ್‌ಜಿಲ್ಲಾ ಬಸ್‌ಗಳು ದಿನವಿಡೀ ಸಂಚರಿಸಿವೆ. ಮೈಸೂರು, ಮಡಿಕೇರಿ ಹೊರತುಪಡಿಸಿ ಬೆಂಗಳೂರು, ದಾವಣಗೆರೆ ಹುಬ್ಬಳ್ಳಿ ಸಹಿತ ಹಲವು ಸ್ಥಳಗಳಿಗೆ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್‌ಗಳು ತೆರಳಿವೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಕ ಅರುಣ್ ತಿಳಿಸಿದ್ದಾರೆ.

ಪುತ್ತೂರು, ಧರ್ಮಸ್ಥಳ, ಸುಳ್ಯ ಹಾಗೂ ಬಿ.ಸಿ.ರೋಡ್ ಘಟಕ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ 37 ಬಸ್‌ಗಳು ಸಂಚಾರ ಆರಂಭಿಸಿವೆ. ಮೊದಲ ಹಂತವಾಗಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರ ಹಾಗೂ ನಗರ ಕೇಂದ್ರಗಳನ್ನು ಸಂಪರ್ಕಿಸಲಾಗಿದೆ. ಬೆಂಗಳೂರು, ಹೊಸಪೇಟೆ, ಶಿವಮೊಗ್ಗ ಮುಂತಾದೆಡೆ 10ರಷ್ಟು ಬಸ್‌ಗಳು ಬುಧವಾರ ರಾತ್ರಿ ಹೊರಡಲಿವೆ. ಪ್ರಯಾಣಿಕರ ಸ್ಪಂದನೆ ಗಮನಿಸಿ ಸ್ಥಳೀಯ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಸಾಧ್ಯವಾದರೆ ಗುರುವಾರ 10 ಹೆಚ್ಚುವರಿ ಬಸ್‌ಗಳು ಓಡಲಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾಹಿತಿ ನೀಡಿದ್ದಾರೆ.