ಬಾಗಲಕೋಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾಗಿ ಭರ್ತಿ ನೂರು ದಿನ ಮುಗಿದಿದೆ. ಬಸ್ ನಲ್ಲಿ ನೂಕು-ನುಗ್ಗಲು, ಕೂಡಲು, ನಿಲ್ಲಲು ಸಹ ಜಾಗ ಸಿಗಲ್ಲ. 50 ಸೀಟು ಸಾಮರ್ಥ್ಯೆದ ಬಸ್ ನಲ್ಲಿ 100 ರಿಂದ 120 ಪ್ರಯಾಣಿಕರು ಇರುತ್ತಾರೆ. ಹೀಗೆ ಅನೇಕ ತೊಂದರೆ ತಾಪತ್ರಯಗಳ ನಡುವೆ ಯೋಜನೆ ನಿರೀಕ್ಷೆ ಮೀರಿ ಯಶಸ್ವಿಯಾಗುತ್ತಿದೆ.
ನಷ್ಟದ ಕೂಪದಲ್ಲಿ ಸಿಕ್ಕು ಪರದಾಡುತ್ತಿದ್ದ ಸಾರಿಗೆ ಸಂಸ್ಥೆಗೆ ಶಕ್ತಿ ದೊಡ್ಡಮಟ್ಟದಲ್ಲಿ ಆನೆಬಲ ತಂದಿದೆ. ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗ ಮೂರು ತಿಂಗಳಿಂದ ನಷ್ಟದ ಪೊರೆ ಕಳಚಿ ಹೊರಬಂದಿದ್ದಲ್ಲದೇ ಲಾಭದತ್ತ ಮುಖ ಮಾಡಿದೆ.
ಶಕ್ತಿ ಯೋಜನೆ ಅನುಷ್ಠಾನದ ಬಳಿಕ ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಡೀ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದೆ.
ನಷ್ಟದಿಂದ ಲಾಭದತ್ತ ಸಾರಿಗೆ ಸಂಸ್ಥೆ: ಯೋಜನೆ ಜಾರಿಯಾದ ಜೂನ್ 11ಕ್ಕೂ ಮೊದಲು ಬಾಗಲಕೋಟೆ ಸಂಸ್ಥೆಯ ಬಸ್ ಗಳಲ್ಲಿ ನಿತ್ಯ 2.23 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಲ್ಲಿ ಶೇ. 25 ರಿಂದ 30 ರಷ್ಟು ಮಹಿಳೆಯರು ಇರುತ್ತಿದ್ದರು. ಇದರಿಂದ ಪ್ರತಿ ದಿನ ಆದಾಯ 65 ರಿಂದ 70 ಲಕ್ಷ ರೂ. ಇರುತ್ತಿತ್ತು. ಇದರಿಂದ ಸಂಸ್ಥೆಗೆ ಪ್ರತಿ ದಿನ 30 ಲಕ್ಷ ಲಾಸ್ ಆಗುತ್ತಿತ್ತು.
ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ 3.12 ಲಕ್ಷಕ್ಕೆ ಏರಿಕೆ ಆಗಿದ್ದು, ಇದರಲ್ಲಿ ಶೇ. 58 ರಷ್ಟು ಅಂದರೆ 1.81 ಲಕ್ಷ ಮಹಿಳಾ ಪ್ರಯಾಣಿಕರು ಇದ್ದಾರೆ. ಸಾರಿಗೆ ಸಂಸ್ಥೆಯ ಆದಾಯ ಪ್ರತಿದಿನ ಸರಾಸರಿ 1.03 ಕೋಟಿ ರೂ. ಆಗಿದೆ. ಇದರಿಂದ 30 ಲಕ್ಷ ರೂ. ಹಾನಿ ತುಂಬಿಕೊಂಡು ಪ್ರತಿ ದಿನ ಸಂಸ್ಥೆ 2 ಲಕ್ಷ ರೂ.ಗಳಷ್ಟು ಲಾಭ ಮಾಡಿಕೊಳ್ಳುತ್ತಿದೆ.
=======
ಬಸ್, ಸಿಬ್ಬಂದಿ ಬೇಡಿಕೆ: ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಭರ್ಜರಿ ಆದಾಯವೂ ಬರುತ್ತಿದೆ. ಆದರೆ, ಜಿಲ್ಲೆಯಲ್ಲಿ 639 ಶೆಡ್ಯೂಲ್ ಗಳು ಇದ್ದು, 670 ಬಸ್ ಗಳು ಸಂಚಾರಕ್ಕೆ ಲಭ್ಯ ಇವೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆ ಆಗಿದೆ. ಸಾಮರ್ಥ್ಯೆ ಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗಬೇಕಿದೆ. ಇದು ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಇನ್ನಿಲ್ಲದಂತೆ ಹೈರಾಣಾಗಿಸುತ್ತಿದೆ. ಮತ್ತೊಂದೆಡೆ ಪ್ರಯಾಣಿಕರು ಪರದಾಟ ಹೇಳತೀರದು. ಅದರಲ್ಲೂ ಶಾಲಾ ವಿದ್ಯಾರ್ಥಿಗಳು, ವೃದ್ದರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಇದೀಗ ಪ್ರಯಾಣಿಕರ ದಟ್ಟನೆ ಕಡಿಮೆ ಮಾಡಲು ಹೊಸದಾಗಿ 100 ಬಸ್ ಗಳು ಹಾಗೂ 336 ಸಿಬ್ಬಂದಿ ಬೇಡಿಕೆಯನ್ನು ಬಾಗಲಕೋಟೆ ವಿಭಾಗದಿಂದ ಸಲ್ಲಿಸಲಾಗಿದೆ. ಅಷ್ಟು ಬಸ್ ಹಾಗೂ ಸಿಬ್ಬಂದಿಯನ್ನು ಒದಗಿಸಿದಲ್ಲಿ ಸಂಸ್ಥೆಯ ಆದಾಯ ಪ್ರತಿ ದಿನ 1.20 ಕೋಟಿ ರೂ. ತಲುಪಬಹುದೆಂದು ಅಂದಾಜಿಸಲಾಗಿದೆ.