ಜಿಲ್ಲೆ

ನಿವೃತ್ತರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಬೀಳ್ಕೊಡುಗೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮೇ 31ಕ್ಕೆ ನಿವೃತ್ತರಾದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಮಡಿಕೇರಿ ಘಟಕದ ಚಾಲಕ ಬೋಧಕರೂ ಆದ ಚಾಲಕ ಪಿ.ಎಸ್. ವೈಲೇಶ, ಚಾಲಕ ಮಹಾಬಲ ಶೆಟ್ಟಿ ಹಾಗೂ ಸಂಚಾರ ನಿಯಂತ್ರಕ ಶ್ರೀನಿವಾಸ್ ಇವರುಗಳನ್ನು ಈಚೆಗೆ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಉಗ್ರಾಣಾಧಿಕಾರಿ ಮಂಜುನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಕ.ರಾ.ರ.ಸಾ. ಸಂಸ್ಥೆಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮೂವರಿಗೂ ಕನ್ನಡ ಪೇಟ, ಮಣಿ ಹಾರ ಹಾಗೂ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಮಟ್ಟದ ಮುಖಂಡ ಶ್ರೀನಿವಾಸ ಅವರನ್ನೂ ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

ಕ.ರಾ.ರ.ಸಾ.ಸಂಸ್ಥೆಯ ಪ.ಜಾ ಮತ್ತು ಪ.ಪಂ. ಸಂಘದ ವಿಭಾಗೀಯ ಅಧ್ಯಕ್ಷ ಬಿ.ಎಸ್. ಕುಮಾರಸ್ವಾಮಿ ಮತ್ತು ಮಡಿಕೇರಿ ಘಟಕದ ಅಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭ ಮಾತನಾಡಿದ ಲೋಕೇಶ್ ಸಾಗರ್, ಪಿ.ಎಸ್. ವೈಲೇಶ್ ಚಾಲಕ ವೃತ್ತಿಯಲ್ಲಿ ಇದ್ದರೂ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಇದಿಗ ನಿವೃತ್ತರಾಗುವ ಮುಖಾಂತರ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಆಗಲಿದೆ ಎಂದರು.

ನಾರಾಯಣ ಹೆಬ್ಬಾಳ್, ಮಂಜುಗೌಡ, ನಾರಾಯಣ ಮೂರ್ತಿ, ಮದನಕುಮಾರ್ ಮತ್ತಿತರರು ಇದ್ದರು.