ಜಿಲ್ಲೆ

ಭಾರತ ಸದೃಢವಾಗಲು ಅಂಬೇಡ್ಕರ್ ಸಂವಿಧಾನ ಕಾರಣ

ಸುನಿಲ್ ಪೊನ್ನೇಟಿ

ಮಡಿಕೇರಿ:

ಅಂಬೇಡ್ಕರ್ ನೀಡಿದ ಸಂವಿಧಾನವೇ ಭಾರತ ಇಷ್ಟು ಸದೃಢವಾಗಿರಲು ಕಾರಣವಾಗಿದೆ ಎಂದು ಮೈಸೂರಿನ ಶಿವಯೋಗಿ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘದ ವತಿಯಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ಶುಕ್ರವಾರ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಪುಸ್ತಕಗಳಲ್ಲಿದ್ದಾರೆ. ಮಕ್ಕಳಿಗೆ ಅವರ ಪುಸ್ತಕಗಳನ್ನು ಪರಿಚಯಿಸಬೇಕು. ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಜ್ಞಾನದ ಜಯಂತಿಯಾಗಬೇಕು. ಅವರನ್ನು ಬೀದಿಯಲ್ಲಿ ನಿಲ್ಲಿಸುವ ಬದಲು ಮನೆಯೊಳಗೆ ಕರೆದುಕೊಂಡು ಹೋಗಬೇಕು. ಅವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು.

ಬಸ್ ಚಾಲಕರ ಮಕ್ಕಳು ಉನ್ನತ ಹುದ್ದೆಗೇರಲು ಅವರು ನೀಡಿದ ಸಂವಿಧಾನ ಕಾರಣ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ತ್ಯಾಗದಿಂದ ನಾವು ಇಷ್ಟರ ಮಟ್ಟಿಗೆ ಬೆಳವಣಿಗೆ ಸಾಧಿಸಿದ್ದೇವೆ. ಇನ್ನಾದರೂ ನಾವು ಗುಲಾಮಗಿರಿಯಿಂದ ಹೊರಬರಬೇಕು ಎಂದು ಹೇಳಿದರು.

ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ಅಂಬೇಡ್ಕರ್ ಅವರ ಕೆಲಸವನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಸ್ವಾವಲಂಬಿಗಳಾಗುವAತೆ ಮಾಡಿ ಅಂಬೇಡ್ಕರ್ ಅವರಿಗೆ ಗೌರವ ದೊರಕುವ ಕೆಲಸ ನಮ್ಮಿಂದಾಗಬೇಕು. ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಆಗುತ್ತದೆ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರಂತೆ ನಾವು ವಿದ್ಯಾವಂತರಾಗಬೇಕು. ಇಷ್ಟೆಲ್ಲ ಯೋಜನೆ ಇದ್ದರೂ ಹಿಂದುಳಿಯುತ್ತಿರುವುದು ಬೇಸರ ತರಿಸುತ್ತಿದೆ. ಕೀಳರಿಮೆ ಹೊಡೆದು ಹಾಕದಿದ್ದರೆ ಮುಂದೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಕೆಎಸ್‌ಆರ್‌ಟಿಸಿ ಬಸ್ ಡಿಪೊದಿಂದ ಬಸ್ ನಿಲ್ದಾಣದವರೆಗೆ ನಡೆದ ಅಂಬೇಡ್ಕರ್ ಪ್ರತಿಮೆ ಮೆರವಣಿಗೆಗೆ ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮರಲಿಂಗಯ್ಯ ಬಿ. ಹೊಸಪೂಜಾರಿ ಚಾಲನೆ ನೀಡಿದರು.

ಮಂಡ್ಯದ ಅಂಬೇಡ್ಕರ್ ವಿಚಾರವಾದಿ ರವಿಕೀರ್ತಿ ನಾಗಪುರ, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ. ಸೋಮಶೇಖರ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಣರಮಣಪ್ಪ, ಖಜಾಂಜಿ ವೆಂಕಟೇಶಮೂರ್ತಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ್, ಎಂ.ರವಿಪ್ರಕಾಶ್, ಉಪಾಧ್ಯಕ್ಷೆ ಬಿ. ಸುಂದರಮ್ಮ, ಬೆಂಗಳೂರು ಅಧ್ಯಕ್ಷ ಮುನಿ ನಾರಾಯಣಸ್ವಾಮಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ. ರಾಜೇಶ್, ನಗರಸಭಾ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಮಡಿಕೇರಿ ಘಟಕ ವ್ಯವಸ್ಥಾಪಕ ಮೆಹಬೂಬ್ ಅಲಿ, ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಿ. ಜಯೇಂದ್ರ, ದಲಿತ ಸಂಘಟನೆಯ ಮುಖಂಡರಾದ ಜಯಪ್ಪ ಹಾನಗಲ್ಲು, ಕೆ.ಬಿ.ರಾಜು, ಎಚ್.ಎಲ್. ದಿವಾಕರ್ ಇದ್ದರು.