ಮಡಿಕೇರಿ:
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಡಿಮೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಆದರೆ ಬಸ್‌ಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಎಲ್ಲಾ ಬಸ್‌ಗಳಲ್ಲೂ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.
ಕೊಡಗಿನಲ್ಲಿ ಸದ್ಯಕ್ಕೆ ಮಡಿಕೇರಿಯಲ್ಲಿ ಮಾತ್ರ ಕೆಎಸ್‌ಆರ್‌ಟಿಸಿಯ ಏಕಮಾತ್ರ ಘಟಕ ಇದೆ. ಇದು ಹೆಸರಿಗೆ ಮಾತ್ರ ಎನ್ನುವಂತೆ ಇದೆ. ಇಲ್ಲಿಯ ಘಟಕ ವ್ಯವಸ್ಥಾಪಕರು ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಗಳಿವೆ. ಕನಿಷ್ಠ ದೂರವಾಣಿ ಕರೆ ಸ್ವೀಕರಿಸುವ ವ್ಯವಧಾನವೂ ಇವರಿಗೆ ಇಲ್ಲ ಎನ್ನುವುದು ಪ್ರಯಾಣಿಕರ ದೂರಾಗಿದೆ. ಈ ಘಟಕದಿಂದ ಹೊರಡುವ ಮತ್ತು ಇಲ್ಲಿಗೆ ಬರುವ ಬಸ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಮಡಿಕೇರಿ ಘಟಕಗಳ ಬಸ್‌ಗಳಿಗಿಂತ ಇತರೆ ಡಿಪೋಗಳ ಬಸ್‌ಗಳು ಪ್ರಯಾಣಿಕರಿಗೆ ತಕ್ಕ ಮಟ್ಟಿಗೆ ಸೇವೆ ಕೊಡುತ್ತಿವೆ.
ಕೊರೊನಾ ಸಮಯದಲ್ಲಿ ಸ್ಥಗಿತಗೊಂಡ ಮಾರ್ಗಗಳ ಪೈಕಿ ಬಹುತೇಕ ಮಾರ್ಗಗಳಿಗೆ ಇನ್ನೂ ಮರು ಚಾಲನೆ ಸಿಕ್ಕಿಲ್ಲ. ಮಡಿಕೇರಿ-ಕುಶಾಲನಗರ ಮಧ್ಯೆ ಬೆಳಗ್ಗೆ ಮತ್ತು ಸಂಜೆ ಬಸ್‌ಗಳ ಕೊರತೆ ಇದೆ. ಸೋಮವಾರಪೇಟೆ ಮತ್ತು ವೀರಾಜಪೇಟೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳವಾಗಿ ಸಂಚರಿಸುತ್ತವೆ. ಬೆಳಗ್ಗೆ ಮತ್ತು ಸಂಜೆ ಶಾಲಾ ವಿದ್ಯಾರ್ಥಿಗಳು, ಸÀರ್ಕಾರಿ ಮತ್ತು ಖಾಸಗಿ ಸಂಸ್ಥೆ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗಗಳಲ್ಲಿ ಓಡಾಡುತ್ತಾರೆ. ಆದರೆ ಸಮಯಕ್ಕೆ ಸರಿಯಗಿ ಬಸ್‌ಗಳು ಇಲ್ಲದಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.
ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಭಾಗಮಂಡಲದಿAದ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯೇ ಇಲ್ಲ. ರಾಷ್ಟಿçÃಯ ಹೆದ್ದಾರಿ 275ರಲ್ಲಿ ಬರುವ ಸುಂಟಿಕೊಪ್ಪದ ನಿವಾಸಿಗಳು ಸಮರ್ಪಕ ಬಸ್‌ಗಳ ಲಭ್ಯತೆ ಇಲ್ಲದೆ ಮಡಿಕೇರಿಗೆ ತೆರಳಲು ಪಡುವ ಕಷ್ಟ ಅಷ್ಟಿಷ್ಟಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರೂ ಈತನಕ ಫಲ ಸಿಕ್ಕಿಲ್ಲ. ಇದೀಗ ಪ್ರಯಾಣ ದರದಲ್ಲೂ ಹೆಚ್ಚಳ ಆಗಿದ್ದು, ಹೆಚ್ಚಿನ ಹಣ ತೆತ್ತು ತುಂಬಿದ ಬಸ್‌ನ ಉಸಿರುಗಟ್ಟಿಸುವ ವಾತಾವರಣದಲ್ಲಿ ಪ್ರಯಾಣಿಸುವ ಅನಿವಾರ್ಯತೆ ಇಲ್ಲಿಯವರದ್ದು.
ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಬಾರದು. ಅದರಲ್ಲೂ ಶಾಲಾ ಕಾಲೇಜು ತರಗತಿ ಸಮಯದ ಬಸ್‌ಗಳ ಸಂಚಾರ ಸ್ಥಗಿತಗೊಂಡರೆ ವಿದ್ಯಾರ್ಥಿಗಳಿಗೆ ನಷ್ಟವಾಗುತ್ತದೆ. ಬಸ್‌ಗಳ ಸಂಖ್ಯೆ ಕಡಿಮೆಯಾದರೆ, ಸರ್ಕಾರಿ ಬಸ್‌ಗಳಲ್ಲಿ ಸುಖಕರ ಪ್ರಯಾಣ ಸಾಧ್ಯವಿಲ್ಲ. ಪ್ರಯಾಣ ದರ ಕೊಟ್ಟವರಿಗೆ ಆಸನಗಳನ್ನು ಕಲ್ಪಿಸಬೇಕು.
ಶರಣ್ ಗೌಡ, ಕೃಷಿಕ, ಹರಗ ಗ್ರಾಮ
ಕೆಎಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಬಹಳ ಪ್ರಮಾಣದಲ್ಲಿ ಕಡಿಮೆ ಆಗಿದೆ. ಮೊದಲು ವಿರಾಜಪೇಟೆಯಿಂದ ವಿವಿಧ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಇದ್ದವು. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಂಚರಿಸಲು ಸುಲಭವಾಗುತ್ತಿತ್ತು. ಈಗ ಬಸ್‌ಗಳ ಸಂಖ್ಯೆ ಕಡಿಮೆಯಾದಂತೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ. ಕೆಲವು ಕಡೆಗಳಲ್ಲಿ ಬಸ್‌ಗಳು ವಿದ್ಯಾರ್ಥಿಗಳನ್ನು ಬಿಟ್ಟು ಹೋಗುವಂಥ ಸ್ಥಿತಿ ಇದೆ.
ಬಿ.ಎನ್. ಶಿವಪ್ರಸಾದ್, ವಿದ್ಯಾರ್ಥಿ, ವಿರಾಜಪೇಟೆ
ಹಲವು ವರ್ಷಗಳಿಂದ ಸುಂಟಿಕೊಪ್ಪ-ಮಡಿಕೇರಿ ನಡುವೆ ಬೆಳಗ್ಗೆ ಮತ್ತು ಸಂಜೆ ವೇಳೆ ನಿತ್ಯ
ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಸಂಚರಿಸುತ್ತಾರೆ. ಆದರೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಜೀವ ಪಣಕ್ಕಿಟ್ಟು ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಕೆಎಸ್‌ಆರ್‌ಟಿಸಿ ಇನ್ನು ಕೂಡ ಸರ್ವೆ ಕಾರ್ಯ ನಡಸುವಲ್ಲೇ ಮಗ್ನವಾಗಿದೆ. ಬದಲಿ ವ್ಯವಸ್ಥೆ ಮಾತ್ರ ಆಗಿಲ್ಲ. ತುಂಬಿದ ಬಸ್ ಅಪಾಯಕಾರಿ ತಿರುವುಗಳಲ್ಲಿ ಅಪಘಾತಕ್ಕೆ ಒಳಗಾದರೆ ಉಂಟಾಗಬಹುದಾದ ಅನಾಹುತಕ್ಕೆ ಯಾರು ಹೊಣೆ?
ಕೆ.ಎ. ಲತೀಫ್, ಸುಂಟಿಕೊಪ್ಪ ನಿವಾಸಿ
ಇತ್ತೀಚಿಗೆ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ ಯಶಸ್ವಿಯಾಗುತ್ತಿದೆ. ಆದರೆ ಮಹಿಳೆಯರಿಗೆ ಉಚಿತ ಮಾಡಿ ಪುರುಷರಿಗೆ ದರ ಹೆಚ್ಚು ಮಾಡುವುದರ ಜತೆಗೆ ಕೆಲ ಮಾರ್ಗಗಳಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ಇರುವ ಬಸ್ ಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ದಿನ ನಿತ್ಯ ಸಂಚರಿಸುವವರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ಗಳ ಸಂಖ್ಯೆ ಹೆಚ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.
ಶೋಭಾ, ಉದ್ಯಮಿ, ಶನಿವಾರಸಂತೆ
ಕರ್ನಾಟಕ ಸರ್ಕಾರ ಉಚಿತ ಬಸ್ ಎಂದು ಘೋಷಣೆ ಮಾಡಿ ಇದೀಗ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಂಡAತಾಗಿದೆ. ಇದರ ಜತೆಗೆ ಅನೇಕ ರಸ್ತೆಗಳಲ್ಲಿ ಬಸ್ ಸೇವೆಯನ್ನೇ ಸ್ಥಗಿತಗೊಳಿಸಿದೆ. ಇದರಿಂದ ಅನೇಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಎಂದು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವವರು ಕಡಿಮೆ ಆಗಿರುವುದರಿಂದ ಖಾಸಗಿ ಬಸ್ ಸೇವೆಯೂ ಬಹುತೇಕ ಸ್ಥಗಿತವಾಗಿದೆ.
ನಟೇಶ್, ಉದ್ಯಮಿ, ಶನಿವಾರಸಂತೆ
ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಹೋಗುವುದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದಾಗಿ ಪರದಾಡುವಂತಾಗಿದೆ. ದಿನನಿತ್ಯದ ಕಚೇರಿ ಕಾರ್ಯಗಳಿಗೆ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಹೋಗುವಂಥ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಗಾಯತ್ರಿ ಪ್ರಶಾಂತ್, ಕಡಿಯತ್ತೂರು ಗ್ರಾಮ, ಕಾರುಗುಂದ
ಭಾಗಮಂಡಲ-ಮಡಿಕೇರಿ ಮಧ್ಯೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಓಡಾಡುತ್ತಾರೆ. ಜಿಲ್ಲಾ ಕೇಂದ್ರಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚು ಇದೆ. ಆದರೆ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಇಲ್ಲ. ಶಕ್ತಿ ಯೋಜನೆಯೂ ಇಲ್ಲಿ ಉಪಯೋಗಕ್ಕೆ ಬಾರದಂತೆ ಆಗಿದೆ. ಪುಣ್ಯ ಕ್ಷೇತ್ರ ತಲಕಾವೇರಿಗೂ ಸರ್ಕಾರಿ ಬಸ್ ಸೇವೆ ಸಮರ್ಪಕವಾಗಿ ಇಲ್ಲ.
ಯೋಗೇಶ್ ಕುಯ್ಯಮುಡಿ, ಭಾಗಮಂಡಲ ನಿವಾಸಿ
ಜಿಲ್ಲೆಯಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಮಾರ್ಗಗಳಲ್ಲಿ ಕುಶಾಲನಗರ-ಮಡಿಕೇರಿ ಮಾರ್ಗ ಮೊದಲನೇ ಸ್ಥಾನದಲ್ಲಿದೆ. ಆದರೆ ಬೆಳಗ್ಗೆ ಮತ್ತು ಸಂಜೆಯ ವೇಳೆ ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಈ ಮಾರ್ಗದಲ್ಲಿ ಸಿಟಿ ಬಸ್ ಸೇವೆ ಇದ್ದರೂ, ಹೆಚ್ಚು ನಿಲುಗಡೆ ಇರುವುದರಿಂದ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಮಾರ್ಗದಲ್ಲಿ ಸುಂಟಿಕೊಪ್ಪದಲ್ಲಿ ಒಂದು ನಿಲುಗಡೆ ಕೊಟ್ಟು ಬಸ್‌ಗಳ ಸಂಚಾರ ಆರಂಭಿಸಿದರೆ ಉತ್ತಮ.
ಪ್ರಶಾಂತ್, ಕುಶಾಲನಗರ ನಿವಾಸಿ
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಡಿಮೆ ಇರುವುದು ನಮ್ಮ ಗಮನಕ್ಕೂ ಬಂದಿದೆ. ಕೆಲವೊಂದು ಕಾರಣಗಳಿಂದ ಈ ಸಮಸ್ಯೆ ಉಂಟಾಗಿದೆ. ಕೊಡಗಿಗೆ ಇನ್ನಷ್ಟೂ ಬಸ್‌ಗಳ ಬೇಡಿಕೆ ಇಡಲಾಗಿದೆ. ಜತೆಗೆ ಕುಶಾಲನಗರದಲ್ಲಿ ಡಿಪೋ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಬಸ್‌ಗಳ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವ ವಿಶ್ವಾಸ ಇದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ