ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನ 
ಜಿಲ್ಲೆ

ಕೃತಕಬುದ್ಧಿಮತ್ತೆ (ಎಐ) ಕಡೆ ಮುಖ ಮಾಡಿದ ಕೆಎಸ್‌ಒಯು

ಮೈಸೂರು: ದೇಶದ ವಿವಿಧ ಮುಕ್ತ ವಿಶ್ವವಿದ್ಯಾಲಯಗಳು ಕೃತಕಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಶನಿವಾರ ‘ವೈಜ್ಞಾನಿಕ ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ’ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಆಂಧಪ್ರದೇಶ ಮುಕ್ತ ವಿಶ್ವವಿದ್ಯಾಲಯಗಳು ಈಗಾಗಲೇ ಎಐ ಬಳಕೆ ಮಾಡುತ್ತಿವೆ. ನಮ್ಮ ಪ್ರಾಧ್ಯಾಪಕರನ್ನು ಎಐಗೆ ಸಜ್ಜುಗೊಳಿಸುವ ಕಾರ್ಯ ಆಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಎಐ ಕೇವಲ ಶೈಕ್ಷಣಿಕ ವಿಚಾರಕ್ಕೆ ಮಾತ್ರವಲ್ಲ ಆಡಳಿತ ಸುಧಾರಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ವಿವಿಯ ಆಡಳಿತದಲ್ಲಿ ಎಐಯನ್ನು ಯಾವ ರೀತಿ ಬಳಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎಂಬ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ನಮ್ಮ ವಿಶ್ವವಿದ್ಯಾಲಯಕ್ಕೆ ಎಐ ಅವಶ್ಯಕತೆ ತುಂಬಾ ಇದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ವಿದ್ಯಾರ್ಥಿಗಳು ಎಐಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಐ ಬಳಕೆಯಲ್ಲಿ ಪ್ರಾಧ್ಯಾಪಕರು ಹಿಂದೆ ಬೀಳದೆ ವಿದ್ಯಾರ್ಥಿ ಗಳ ಹಾದಿಯಲ್ಲಿಯೇ ಸಾಗಬೇಕು. ಮುಕ್ತ ವಿವಿಯಲ್ಲಿ ಎಲ್ಲ ಸಮಯದಲ್ಲೂ ವಿದ್ಯಾರ್ಥಿಗಳು ಪ್ರಾಧ್ಯಾಪಕರೊಂದಿಗೆ ಇರಲು ಸಾಧ್ಯವಿಲ್ಲ. ಹೀಗಾಗಿ ಎಐ ಬಳಸಿಕೊಂಡು ಮತ್ತಷ್ಟು ಪರಿಣಾಮಕಾರಿಯಾದ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದರು.

ಕೃತಕಬುದ್ಧಿಮತ್ತೆಯ ವಾಸ್ತುಶಿಲ್ಪಿ ಡಾ.ಚೇತನಾ ಹೆಗ್ಡೆ ಮಾತನಾಡಿ, ಹೊಸ ತಂತ್ರಜ್ಞಾನ ಬಂದಾಗ ಅದನ್ನು ಅಳವಡಿಸಿಕೊಳ್ಳುವ ಕಡೆಗೆ ಆಸಕ್ತಿ ತೋರಬೇಕು. ಕ್ಯಾಲ್ಕುೃಲೇಟರ್ ಬಂದ ಸಂದರ್ಭದಲ್ಲೂ ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸಿದ್ದರು. ಪ್ರಸ್ತುತ ಎಐ ಉದ್ಯೋಗ ಕಸಿಯುವ ಆತಂಕ ಮೂಡಿಸಿದೆ. ಆದರೆ, ಎಐ ಬಂದ ನಂತರವೂ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಕ್ತ ವಿವಿ ಕುಲಸಚಿವ ಪ್ರೊ.ಎಂ.ಪಿ. ಸದಾಶಿವ ಮಾತನಾಡಿ, ತಂತ್ರಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ. ಕೈಗಾರೀಕರಣ ಸಂದರ್ಭ ಸಾಕಷ್ಟು ಜನರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಇತ್ತು. ಆದರೆ, ಪ್ರಸ್ತುತ ಕೈಗಾರಿಕೆಗೆ ಮನುಷ್ಯನಿಗೆ ಅತ್ಯಂತ ಅವಶ್ಯಕ ವಾಗಿದೆ. ಹಾಗಾಗಿ ಎಐ ಕುರಿತು ಆತಂಕ ಪಡದೆ ಅದನ್ನು ಬಳಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಎಐ ಬಳಕೆಯಿಂದ 2030 ರೊಳಗೆ 197 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿಯಾಗಲಿದ್ದು, ಕೇವಲ 90 ಮಿಲಿಯನ್ ಕೆಲಸಗಳಲ್ಲಿ ಮಾತ್ರ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಸ್. ಆನಂದ್ ಕುಮಾರ್, ಅಧ್ಯಯನ ಕೇಂದ್ರದ ಡೀನ್ ಡಾ.ಎನ್. ಆನಂದ ಗೌಡ, ಶೈಕ್ಷಣಿಕ ಡೀನ್ ಪ್ರೊ.ಎಂ. ರಾಮನಾಥಮ್ ನಾಯ್ಡು, ಆಂತರಿಕ ಗುಣಮಟ್ಟ ಆಶ್ವಸನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್. ನಿರಂಜನ್ ರಾಜ್, ಸಂಪನ್ಮೂಲ ವ್ಯಕ್ತಿ ಡಾ.ಶಂತನು ಬಿಸ್ವಾಸ್ ಇದ್ದರು.