ಜಿಲ್ಲೆ

ಕೆಎಸ್ಒಯು ಪ್ರಶ್ನೆಪತ್ರಿಕೆ ಸೋರಿಕೆ: ಮತ್ತೆ ಇಬ್ಬರ ಬಂಧನ

ಮಂಜುನಾಥ ತಿಮ್ಮಯ್ಯ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ತನಿಖೆಯನ್ನು ಚುರುಕುಗೊಳಿಸಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.


ಸೋರಿಕೆಯಾಗಿರುವ ಅಂತಿಮ ವರ್ಷದ ಬಿಕಾಂನ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಎಲ್ಲಿಂದ ಬಂದಿದೆ ಎಂಬುದರ ಕುರಿತು ಪೊಲೀಸರು ಜಾಲಾಡುತ್ತಿದ್ದು, ಖಚಿತ ಮಾಹಿತಿ ಆಧರಿಸಿ ಚಾಮರಾಜನಗರದಲ್ಲಿರುವ ಮುಕ್ತ ವಿವಿಯ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


ಈ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಇಬ್ಬರು ಹಂಗಾಮಿ ನೌಕರರು ಕಾರಣವಾಗಿದ್ದಾರೆ ಎಂಬುದು ತನಿಖೆಯಿಂದ ಪತ್ತೆಯಾಗಿದ್ದು, ಅವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಮಾಡಲಾಗಿದೆ.

ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ವಾಟ್ಸ್‌ಆ್ಯಪ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿದ್ದ ಇಬ್ಬರು ವಿದ್ಯಾರ್ಥಿಗಳಾದ ನವೀನ್ ಮತ್ತು ಮುರಳಿ ಇಬ್ಬರನ್ನೂ ಬಂಧಿಸಿದ್ದಾರೆ. ಇದೀಗ ಚಾಮರಾಜನಗರದಲ್ಲಿ ಮತ್ತೆ ಇಬ್ಬರ ಬಂಧನವಾಗಿದೆ.


ಮುಕ್ತ ವಿವಿಗೂ ಭೇಟಿ ನೀಡಿ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲನೆ ನಡೆಸಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಈ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.