ಜಿಲ್ಲೆ

ಕೆಎಸ್‌ಒಯು ಶೈಕ್ಷಣಿಕ ಕಾಮಧೇನು: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಶೈಕ್ಷಣಿಕ ವಂಚಿತರು, ಸಮಾಜದ ಕೆಳಸ್ಥರದಲ್ಲಿದ ಜನರು, ಶೋಷಿತರು, ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರಿಗೆ ಶಿಕ್ಷಣ ನೀಡುವ ಮುಖಾಂತರ ಶೈಕ್ಷಣಿಕ ಕಾಮಧೇನು ಎನಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಎಸ್‌ಒಯು ಶೈಕ್ಷಣಿಕ ಚಟುವಟಿಕೆಗಳ ಪ್ರಚಾರಾಂದೋಲನ ವಾಹನದ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಗೆ ಸರಿಸಮಾನವಾಗಿ ತಾಂತ್ರಿಕತೆಯೊಂದಿಗೆ ಪ್ರವೇಶಾತಿ ನೀಡುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿರುವ ಶೈಕ್ಷಣಿಕ ಸವಲತ್ತನ್ನು ಜಿಲ್ಲೆಯ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕೆಎಸ್‌ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಆರ್.ಮಿಲನಾ ಮಾತನಾಡಿ, ದೇಶದ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕೆಎಸ್‌ಒಯು ಅಗ್ರಸ್ಥಾನದಲ್ಲಿದೆ. ಶೈಕ್ಷಣಿಕ ಸ್ವರ್ಧೆಯಲ್ಲಿ ತಾಂತ್ರಿಕ ಸೌಲಭ್ಯ ನೀಡುವ ಮೂಲಕ ಸಾಂಪ್ರದಾಯಿಕ ಶಿಕ್ಷಣಕ್ಕೆ ಸೆಡ್ಡು ಹೊಡೆದು ನಿಂತಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ದಿಯ ಮಾಪನಕ್ಕೆ ಕೆಎಸ್‌ಒಯು ಕೊಡುಗೆಯನ್ನು ಮಂಡ್ಯದ ಪ್ರತಿ ಕುಟುಂಬವು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ರಾಷ್ಟ್ರ ಯುವಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಕೆಎಸ್‌ಒಯು ಪ್ರಚಾರಾಂದೋಲನದ ಸಂಯೋಜಕ ಸಿದ್ದೇಗೌಡ, ಹನುಮೇಗೌಡ ಇತರರಿದ್ದರು.

ಇದಕ್ಕೂ ಮುನ್ನ ಚಾಮರಾಜನಗರದಿಂದ ಮಂಡ್ಯಕ್ಕೆ ಆಗಮಿಸಿದ ಶೈಕ್ಷಣಿಕ ಪ್ರಚಾರಾಂದೋಲನ ವಾಹನಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಎಸ್‌ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ಸಿಬ್ಬಂದಿಯೊಂದಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬರಮಾಡಿಕೊಂಡರು. ಬಳಿಕ ಪುಷ್ಪಾಭಿಷೇಕ ಮಾಡಿ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಕೆಎಸ್‌ಒಯು ಕಾರ್ಯನಿರ್ವಹಣೆ, ಹಾಲಿ ಇರುವ ಕೋರ್ಸ್‌ಗಳು, ಹೊಸ ಕೋರ್ಸ್‌ಗಳ ಆರಂಭ, ಶುಲ್ಕ ಪ್ರಮಾಣ, ರಿಯಾಯಿತಿ, ದೂರ ಶಿಕ್ಷಣ ಪಡೆಯುವ ವಿಧಾನ ಮತ್ತದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು. ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ಪ್ರಚಾರಾಂದೋಲನ ವಾಹನದ ಎಲ್‌ಇಡಿ ಪರದೆ ಮೂಲಕ ಕೆಎಸ್‌ಒಯು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವೀಡಿಯೋ ಸಹಿತ ಮಾಹಿತಿ ಪ್ರಸಾರ ಮಾಡಲಾಯಿತು. ಜತೆಗೆ, ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಲಾಯಿತು.