ಜಿಲ್ಲೆ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮರು ಪರೀಕ್ಷೆಗೆ ಕೆಎಸ್ಒಯು ನಿರ್ಧಾರ

ಮೈಸೂರು: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ತನಿಖೆ ಕೈಗೊಂಡಿರುವ ಪೊಲೀಸ್ ವರದಿ ಆಧರಿಸಿ ಶಾಮೀಲಾಗಿರುವ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತೀರ್ಮಾನಿಸಿದೆ. ಜತೆಗೆ, ಮರು ಪರೀಕ್ಷೆ ನಡೆಸಲು ಮುಂದಾಗಿದೆ.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸೆ.4ರಿಂದ ಪದವಿ ವಿಭಾಗದ ಪರೀಕ್ಷೆಗಳು ಆರಂಭವಾಗಿದ್ದು, ತೃತೀಯ ಬಿಕಾಂನ ಕಂಪ್ಯೂಟರ್ ಸೈನ್ಸ್ ವಿಷಯದ ಪ್ರಶ್ನೆಪತ್ರಿಕೆ ಒಂದು ದಿನ ಮುಂಚಿತವಾಗಿ ವಾಟ್ಸ್‌ಆ್ಯಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಅನುಮಾನವಿದ್ದ ವಿದ್ಯಾರ್ಥಿಯೊಬ್ಬರು ಖರೀದಿಯ ನೆಪದಲ್ಲಿ ಸೆ.20ರಂದು ನಡೆಯಲಿದ್ದ ವಿಷಯದ ಪ್ರಶ್ನೆಪತ್ರಿಕೆಯನ್ನು ತರಿಸಿಕೊಂಡಿದ್ದರು. ಪರೀಕ್ಷೆಯ ವೇಳೆ ಎರಡೂ ಪತ್ರಿಕೆಯಲ್ಲೂ ಹೋಲಿಕೆ ಕಂಡುಬಂದಿತ್ತು.


ಈ ಕುರಿತು ನಗರದ ಜಯಲಕ್ಷ್ಮೀಪುರ ಪೊಲೀಸ್ ಠಾಣೆಗೆ ತೃತೀಯ ಬಿ.ಕಾಂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಚಂದು ದೂರು ನೀಡಿದ್ದರು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.


ಮುಕ್ತ ವಿಶ್ವವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಪೊಲೀಸರು ತೆರಳಿ ಮಹಜರು ನಡೆಸಿದ್ದು, ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಖಚಿತಗೊಂಡಿದೆ. 3 ಸಾವಿರ ರೂ.ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಪ್ರಶ್ನೆ ಪತ್ರಿಕೆಯನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದವರು ಯಾರು? ಎಲ್ಲಿಂದ ಕಳುಹಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


‘ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ದೃಢವಾಗಿದ್ದು, ತೃತೀಯ ವರ್ಷ ಬಿಕಾಂನ ಕಂಪ್ಯೂಟರ್ ಸೈನ್ ವಿಷಯದ ಪ್ರಶ್ನೆ ಪತ್ರಿಕೆ ಮಾತ್ರ ಹೀಗೆ ಆಗಿದೆ. ಉಳಿದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಅವರ ವರದಿ ಆಧರಿಸಿ ನಮ್ಮ ಸಿಬ್ಬಂದಿ ಯಾರಾದರೂ ಶಾಮೀಲಾಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ, ಇದೊಂದು ವಿಷಯಕ್ಕೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಕರಾಮುವಿ ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ ತಿಳಿಸಿದ್ದಾರೆ.