ಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದಲ್ಲಿ ಪ್ರಸಕ್ತ ಸಾಲಿನಿಂದ ದ್ವಿಪದವಿಗೆ ಅವಕಾಶ ಕಲ್ಪಿಸಲಾಗಿದೆ. ಅಂತೆಯೇ ಸೈಬರ್ ಸೆಕ್ಯೂರಿಟಿ, ಅರ್ಥ್‌ಸೈನ್ಸ್ ಬಿಎಸ್ಸಿ, ಎಂಎಸ್‌ಡಬ್ಲ್ಯು, ಟೂರಿಸಂ ಸೇರಿದಂತೆ ಹತ್ತು ಹೊಸ ಕೋರ್ಸ್‌ಗಳ ಆರಂಭಕ್ಕೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಇವುಗಳಿಗೆ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.
ನಗರದ ಕೆಎಸ್‌ಒಯು ಪ್ರಾದೇಶಿಕ ಕಚೇರಿಯಲ್ಲಿ ಪ್ರವೇಶಾತಿ ಸಂಬಂಧ ಫೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಕೆಎಸ್‌ಒಯುನಲ್ಲಿ ಪ್ರವೇಶ ಪಡೆಯುವ ಆಟೋ/ಕ್ಯಾಬ್ ಚಾಲಕರು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ರಿಯಾಯಿತಿ, ಕೆಎಸ್‌ಆರ್‌ಟಿಸಿ ಚಾಲಕರಿಗೆ ಶೇ.25ರಷ್ಟು ವಿನಾಯಿತಿ ನೀಡಲಾಗುತ್ತದೆ. ಕೋವಿಡ್-19ನಿಂದ ಮೃತಪಟ್ಟಿವರಿಗೆ ಸಂಬಂಧಿಸಿದಂತೆ ಅವರ ಮಕ್ಕಳು, ಪೂರ್ಣವಾಗಿ ಅಂಧತ್ವ ಹೊಂದಿರುವ ವಿದ್ಯಾರ್ಥಿಗಳಿಗೆ(ಬಿಇಡಿ, ಎಂಬಿಎ ಹೊರತುಪಡಿಸಿ) ಹಾಗೂ ತೃತೀಯ ಲಿಂಗಿಗಳಿಗೆ ಪ್ರವೇಶಾತಿ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ ಇದೆ ಎಂದು
ಇನ್ನು ಈವರೆಗೆ ಒಟ್ಟಿಗೆ ದ್ವಿಪದವಿ ಪಡೆಯಲು ಅವಕಾಶವಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಇಂತಹ ಅವಕಾಶವನ್ನು ಕಲ್ಪಿಸಲಾಗಿದೆ. ಇದನ್ನು ಪದವಿ ಪಡೆಯಲಿಚ್ಚಿಸುವವರು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರವೇಶಾತಿ ಪ್ರಕ್ರಿಯೆ ಮತ್ತು ಅಂಕಪಟ್ಟಿಯು ಡಿಜಿಟಲೀಕರಣವಾಗಿದೆ. ಆನ್‌ಲೈನ್ ಮೂಲಕವೇ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗುವುದು. ಕೆಎಸ್‌ಒಯುಗೆ ಅಭ್ಯರ್ಥಿಗಳ ಪ್ರವೇಶಾತಿ ಪ್ರಮಾಣ ಹೆಚ್ಚಿಸಲು ಖುದ್ದಾಗಿ ರಾಜ್ಯದ ಎಲ್ಲ ಕೆಎಸ್‌ಒಯು ಪ್ರಾದೇಶಿಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಪ್ರವೇಶಾತಿ ಪಡೆದಿರುವ ಹಾಗೂ ಪ್ರವೇಶ ಬಯಲು ಬರುವ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ. ಜತೆಗೆ ವಿವಿಯ ಶೈಕ್ಷಣಿಕ ಸೌಲಭ್ಯ ಮತ್ತು ನವಮಾದರಿಯ ಪ್ರವೇಶಾತಿ ಆಯಾಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದರು.
ಪ್ರತಿ ವರ್ಷ ಜನವರಿಯಿಂದ ಮಾರ್ಚ್ ಅಂತ್ಯದವರಿಗೆ ಮೊದಲ ಅವಧಿಯಲ್ಲಿ ಹಾಗೂ ಜುಲೈನಿಂದ ಸೆಪ್ಟಂಬರ್‌ವರೆಗೆ 2ನೇ ಅವಧಿಯಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ ಜನವರಿ-ಮಾರ್ಚ್ ಅವಧಿಯ 2022-23ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ 12ರಿಂದ 15 ಸಾವಿರ ಅಭ್ಯರ್ಥಿಗಳ ಪ್ರವೇಶಾತಿ ನಡೆಸಲು ಗುರಿ ಹೊಂದಲಾಗಿದೆ. ಸಂಪೂರ್ಣ ಪಾರದರ್ಶಕತೆಗೆ ಅನುಗುಣವಾಗಿ ಆನ್‌ಲೈನ್ ಮೂಲಕ ಶುಲ್ಕ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲೇ ಶೈಕ್ಷಣಿಕ ಪ್ರಯೋಜನ ಪಡೆಯಲು ರಾಜ್ಯದ 24 ಪ್ರಾದೇಶಿಕ ಕೇಂದ್ರಗಳಿಗೂ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗಿದೆ. 1046 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 64 ಕೋರ್ಸ್‌ಗಳಿಗೆ ಪ್ರವೇಶಾತಿ ನಡೆಯುತ್ತಿದೆ ಎಂದು ವಿವರಿಸಿದರು.
ಕೆಎಸ್‌ಒಯು ದೂರ ಶಿಕ್ಷಣ ನೀಡುವ ರಾಜ್ಯದ ಅಧಿಕೃತ ಏಕೈಕ ವಿವಿಯಾಗಿದೆ. ಯುಜಿಸಿ ನಿಯಮಾವಳಿಗಳಂತೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ನ್ಯಾಕ್ ಮಾನ್ಯತೆಯನ್ನು ನಿರೀಕ್ಷಿಸಲಾಗಿದೆ. ನ್ಯಾಕ್ ತಂಡದ ಪರಿಶೀಲನೆಯಲ್ಲಿ ಕೆಎಸ್‌ಒಯುಗೆ 3.26 ಅಂಕಗಳು ಬಂದರೆ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಲು ಅವಕಾಶ ಸಿಗಲಿದೆ. ಆಧುನಿಕ ಮತ್ತು ತಾಂತ್ರಿಕ ಶಿಕ್ಷಣ ವ್ಯವಸ್ಥೆಯು ವಿವಿಯ ಹೆಗ್ಗಳಿಕೆ. ವಿವಿಯ ಪ್ಲೇಸ್‌ಮೆಂಟ್ ಮುಖಾಂತರ ನಿಯಮಿತವಾಗಿ ಉದ್ಯೋಗ ಮೇಳ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿವಿಗಳೊಂದಿಗೆ ಎಂಒಯು ಮೂಲಕ ಕೆಎಸ್‌ಒಯು ವಿದ್ಯಾರ್ಥಿಗಲಿಗೆ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕೆಎಸ್‌ಒಯು ರಿಜಿಸ್ಟರ್ ಪ್ರೊ.ಕೆ.ಎಲ್.ಎನ್.ಮೂರ್ತಿ, ಸ್ಟಡಿ ಸೆಂಟರ್ ಡೀನ್ ಪ್ರೊ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ, ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಆರ್.ಮಿಲನಾ ಹಾಜರಿದ್ದರು.