ಜಿಲ್ಲೆ

ಸಂಸ್ಕಾರ ನೀಡಿದರೆ ಮಕ್ಕಳು ದೇಶದ ಆಸ್ತಿ,  ನಾಟಕಕಾರ ಡಾ. ಶಶಿಧರ ನರೇಂದ್ರ ಅಭಿಮತ,  ಅಂತರ್ ವಲಯ ಯುವಜನೋತ್ಸವಕ್ಕೆ ಚಾಲನೆ

Dharwada - Basavaraj Idli

ಹುಬ್ಬಳ್ಳಿ: ಯಾವ ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರ, ಸಹನೆ, ತಾಳ್ಮೆಯ ಪಾಠಗಳು ಸಿಗುತ್ತವೆಯೋ ಅವರು ಎಂದೂ ಕೆಟ್ಟವರಾಗುವುದಿಲ್ಲ, ಅಂತಹ ಮಕ್ಕಳು ದೇಶದ ಆಸ್ತಿಯಾಗಿ ಬೆಳೆಯುತ್ತಾರೆ ಎಂದು ನಟ, ನಾಟಕಕಾರ ಡಾ. ಶಶಿಧರ ನರೇಂದ್ರ ಹೇಳಿದರು.

ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರ್ ವಲಯ ಯುವಜನೋತ್ಸವ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾಜದಲ್ಲಿ ಅವರು ದುರ್ಘಟನೆಗಳಿಗೆ ಕಾರಣರಾಗುತ್ತಾರೆ. ಇಂದು ಸಾಧನೆ ಮಾಡಬೇಕೆಂದು ಮನಸ್ಸು ಇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಲೆಗಾಗಿ ಕಲೆಯಲ್ಲ, ಅದು ಮನೋರಂಜನೆಗಾಗಿಯೂ ಅಲ್ಲ ಬದಲಾಗಿ ಕಲೆಯು ವಿಕಾಸಕ್ಕಾಗಿ, ಬದುಕಿಗೆ ಮುಕ್ತಿ ಕೊಡುವುದಕ್ಕಾಗಿ ಇರುವಂತದ್ದು, ಬದುಕು ಸುಸಂಸತಗೊಳಿಸಿಕೊಳ್ಳಲು ಇದೆಲ್ಲವೂ ಬೇಕೇಬೇಕು. ಭಾರತದಲ್ಲಿ ಹುಟ್ಟಿದವರು ಸುಸಂಸತರೇ ಆಗಿರುತ್ತಾರೆ. ಅವರು ಎಂದೂ ಉಗ್ರರಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಕಾನೂನು ವಿದ್ಯಾರ್ಥಿಗಳಿಗೆ ಎಲ್ಲದರ ಪ್ರಾಥಮಿಕ ಜ್ಞಾನ ಬೇಕು. ಸಾಂಸ್ಕೃತಿಕ ಮನಸ್ಸು ಇರಬೇಕು. ಇದಕ್ಕೆ ಪೂರಕವಾಗಿ ಇಂತಹ ಯುವಜನೋತ್ಸವಗಳು ಇರುತ್ತವೆ. ತಾಂತ್ರಿಕತೆ ಜತೆಗೆ ಸಮಾಜಕ್ಕೆ ಪೂರಕವಾಗಿ ಕಲಾ ಪ್ರದರ್ಶನ ಮಾಡಿ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಇಂದು ಸಮಾಜ, ಕುಟುಂಬಗಳು ಒಡೆದು ಹೋಗುತ್ತಿವೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಭಾರತೀಯ ಸಂಸ್ಕೃತಿಯನ್ನು ಬೇರೆಬೇರೆ ರಾಷ್ಟ್ರಗಳು ಪಾಲಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸಮಾಜವು ತನ್ನ ಮೂಲ ಉದ್ದೇಶ, ತತ್ವದಿಂದ ವಿಚಲಿತವಾಗಬಾರದು ಎಂದು ಹೇಳಿದರು.

ಬುದ್ಧ ಜ್ಞಾನದ ಸಂಕೇತ. ಆತನ ಬೋಧನೆ, ತತ್ವಗಳು ಇಂದಿಗೂ ಸಮಾಜಕ್ಕೆ ಅನ್ವಯವಾಗುತ್ತವೆ. ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಲು ಪ್ರೇರಣೆ ನೀಡುತ್ತವೆ. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಪರಿವರ್ತನೆಗೆ ಪೂರಕವಾಗಿವೆ. ವ್ಯಕ್ತಿಗೆ ಸಂಸ್ಕಾರ ನೀಡುತ್ತವೆ. ಮೌಲ್ಯಾಧಾರಿತ ಶಿಕ್ಷಣವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕುಲಸಚಿವೆ ಗೀತಾ ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಗಿರೀಶ ಕೆ.ಸಿ., ಪ್ರಾಧ್ಯಾಪಕರು, ಸಿಬ್ಬಂದಿ, ಸ್ಪರ್ಧಿಗಳು, ಭಾಗವಹಿಸಿದ್ದರು.

ಚನ್ನಮ್ಮ ಮಠದ ನಿರೂಪಿಸಿದರು. ಪ್ರಮತಿ ಪ್ರಾರ್ಥಿಸಿದರು. ರೀಮಾ ಎಂ. ಸ್ವಾಗತಿಸಿದರು. ಸರಿತಾ ಅತಿಥಿಗಳನ್ನು ಪರಿಚಯಿಸಿದರು. ಭೂಮಿಕಾ ತಂಡಗಳನ್ನು ಪರಿಚಯಿಸಿದರು. ಹರ್ಷಿತಾ ವಂದಿಸಿದರು.