ಹುಬ್ಬಳ್ಳಿ: ಭಾರತದ ಪ್ರಾಚೀನ ನ್ಯಾಯಶಾಸ್ತ್ರದ ಬೆಳವಣಿಗೆಗೆ ಕನ್ನಡಿಗ ವಿದ್ವಾಂಸ ವಿಜ್ಞಾನೇಶ್ವರರ ಕೊಡುಗೆ ಅಪಾರವಾಗಿದೆ. ಭಾರತೀಯ ನ್ಯಾಯಶಾಸ್ತ್ರಜ್ಞರು ನೈಜ ಬುದ್ಧಿ ಉಳ್ಳವರೇ ವಿನಃ ಕೃತಕ ಬುದ್ಧಿಯುಳ್ಳವರಲ್ಲ ಎಂದು ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಹೇಳಿದರು.
ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಪ್ರಾಚೀನ ಭಾರತೀಯ ನ್ಯಾಯಶಾಸ್ತ್ರ ಮತ್ತು ಅದರ ಸಮಕಾಲೀನ ಪ್ರಸ್ತುತತೆ ಕುರಿತು ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ದೇಶದ ನ್ಯಾಯ ವ್ಯವಸ್ಥೆಗೆ ಧರ್ಮವೇ ಮೂಲ ಅಡಿಪಾಯ ಹಾಗೂ ಧರ್ಮವಿಲ್ಲದೇ ನ್ಯಾಯವಿಲ್ಲ, ನ್ಯಾಯವಿಲ್ಲದೇ ಧರ್ಮವಿಲ್ಲ ಎಂಬಂತೆ ಪ್ರಾಚಿನ ನ್ಯಾಯ ಶಾಸ್ತ್ರರು ಗ್ರಂಥ, ಸ್ಮೃತಿ, ಶೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಅವರು ಹಾಕಿಕೊಟ್ಟ ತಳಹದಿಯನ್ನು ಪ್ರಸ್ತುತ ನ್ಯಾಯಾಧೀಶರು ಸಹ ನ್ಯಾಯದಾನ ನೀಡಲು ಅನುಸರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಡಾ. ಪಿ. ಪುನೀತ್ ಅವರು ಮಾತನಾಡಿ, ಭಾರತದ ನ್ಯಾಯಾಂಗ ವ್ಯವಸ್ಥೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಮೌರ್ಯ ಮತ್ತು ಗುಪ್ತರ ಕಾಲದಿಂದಲೂ ಬೆಳವಣಿಗೆ ಹೊಂದಿರುವುದನ್ನು ಕಾಣಬಹುದು ಎಂದರು.
ವಿಜ್ಞಾನೇಶ್ವರರು ಮಿತಾಕ್ಷರ ಮೂಲಕ ಅನೇಕ ಧರ್ಮ ಶಾಸ್ತ್ರಗಳನ್ನು ರಚಿಸಿ ಅವುಗಳ ಮುಖಾಂತರ ಸಮಾಜದ ಜನಸಾಮಾನ್ಯರ ನಡುವಿನ ಸಂಬಂಧ, ಸರ್ಕಾರದ ಆಡಳಿತ, ಅಧಿಕಾರ ವಿಭಜನೆ, ಸ್ತ್ರೀಯರ ಸ್ಥಾನಮಾನ ಮತ್ತು ಹಕ್ಕುಗಳ ಕುರಿತು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಬಿ. ಪಾಟೀಲ್ ಮಾತನಾಡಿ, ದೇಶದ ನ್ಯಾಯಶಾಸ್ತ್ರಜ್ಞರು ತಮ್ಮ ಕೊಡುಗೆಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ವಿಜ್ಞಾನೇಶ್ವರರು ತಮ್ಮ ಕೃತಿಯಲ್ಲಿಯೇ ಸಮಾನತೆ, ಉತ್ತರಾಧಿಕಾರ, ಆಸ್ತಿ, ವಿವಾಹ, ಸಾಮಾಜಿಕ ಭದ್ರತೆ ಹಾಗೂ ಅಪರಾಧಕ್ಕೆ ಶಿಕ್ಷೆ ಇನ್ನು ಮುಂತಾದ ನ್ಯಾಯಶಾಸ್ತ್ರದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ವರಿಗೂ ಸಮಬಾಳು - ಸಮಪಾಲು ಎಂಬ ಅಂಕಿತವನ್ನು ಸಾರಿದ್ದಾರೆ. ವಿಜ್ಞಾನೇಶ್ವರರ ಉಲ್ಲೇಖಗಳು ಭಾರತೀಯ ಸಂವಿಧಾನದಲ್ಲಿ ಉಲ್ಲೇಖಗೊಂಡಿವೆ ಎಂದರು.
ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ್ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ 60ಕ್ಕೂ ಹೆಚ್ಚು ಸಂಯೋಜಿತ ಕಾನೂನು ಕಾಲೇಜುಗಳ ಪ್ರಾಂಶುಪಾಲರು ಮತ್ತು ಶಿಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪೂರ್ತಿ ಹೊಸಕೇರಿ ಸ್ವಾಗತಿಸಿದರು, ಶ್ರೇಯಾ ಕಾಂಬ್ಲಿ ಪ್ರಾಥಿರ್ಸಿದರು. ಅನನ್ಯ ಕೊಲ್ಹಾರ್ ನಿರೂಪಿಸಿದರು. ಕುಲಸಚಿವೆ ಗೀತಾ ಕೌಲಗಿ ವಂದಿಸಿದರು.