ಹುಬ್ಬಳ್ಳಿ: ಹಿಂದುತ್ವದ ಪರ ನಿಲುವು ಬಹಿರಂಗ ಪಡಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಇಂದಿನ ಇತರ ಕಾಂಗ್ರೆಸ್ಸಿಗರಿಗೆ ಮಾದರಿಯಾಗಿದ್ದಾರೆ. ಅವರ ಹಿಂದುತ್ವದ ನಿಲುವು ನಾಟಕವೋ, ನಿಜವೋ ಎಂಬುದನ್ನು ದೇವರು ತೀರ್ಮಾನ ಮಾಡುತ್ತಾನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಅವರಿಗೆ ಈಗಾಲಾದರೂ ಬುದ್ಧಿ ಬಂದಿದೆ. ಸಿ.ಎಂ. ಸಿದ್ದರಾಮಯ್ಯ ಅವರಿಗೂ ಅದೇ ಬುದ್ಧಿ ಬರಲಿ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದೇ ಹಿಂದುತ್ವ ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಹಿಂದುತ್ವ ಈಗಲೂ ಇದೆ. ಎಲ್ಲರೂ ಧರ್ಮದ್ರೋಹಿಗಳಲ್ಲ. ಕೆಲವರು ನಾಟಕೀಯವಾಗಿ ಮತಬ್ಯಾಂಕ್‌ಗಾಗಿ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಡಿಕೆಸಿ ಕುಂಭಮೇಳದಲ್ಲೂ ಪಾಲ್ಗೊಂಡಿದ್ದರು. ಅವರಿಗೆ ಹಿಂದುತ್ವದ ಜಾಗೃತಿ ಉಂಟಾಗಿದೆ. ಮಹಾತ್ಮ ಗಾಂಧಿ ಅವರೂ ಹಿಂದುತ್ವವನ್ನು ಪ್ರತಿಪಾದಿಸಿದ್ದರು. ಅವರು ಪ್ರಾಣ ಬಿಡುವಾಗ ಹೇ ರಾಮ್ ಎಂದಿದ್ದರು. ಅವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆಯಲಾಗಿದೆಯೇ ಹೊರತು ‘ಹೇ ಅಲ್ಹಾ, ಹೇ ಯೇಸು’ ಎಂದಲ್ಲ ಎಂದರು.
ಹಿಂದುತ್ವ ಕೇವಲ ಬಿಜೆಪಿಯ ಸ್ವತ್ತಲ್ಲ, ಆಸ್ತಿನೂ ಅಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದೇ ಹಿಂದು ಧರ್ಮ. ಈ ನಿಟ್ಟಿನಲ್ಲಿ ನಮ್ಮ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲು ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲೆಗಳಲ್ಲಿ ಬ್ರಿಗೇಡ್ ಸಮಿತಿ ರಚಿಸಲಾಗುವುದು. ಸಂಘಟನೆ ಕಟ್ಟಿ, ಸಮಾಜದ ಋಣ ತೀರಿಸಲಾಗುವುದು ಎಂದರು.
ಹಿಂದುತ್ವ ನಾಶಮಾಡಲು ಯತ್ನಿಸಿದ ವ್ಯಕ್ತಿ, ಪಕ್ಷ ದೇಶದಲ್ಲಿ ನಿರ್ನಾಮ ಆಗುತ್ತಿದೆ. ರಾಜಕಾರಣಿಗಳ ಮಗಳನ್ನು ಮುಸ್ಲಿಮರು ಆಸೆ ತೋರಿಸಿ, ಅನ್ಯಾಯ ಮಾಡಿದಾಗ ಲವ್ ಜಿಹಾದ್ ಎಂಬುದವರಿಗೆ ಗೊತ್ತಾಗುತ್ತದೆ. ಯಾರನ್ನೋ ತೃಪ್ತಿಪಡಿಸಲು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರಂಥ ರಾಷ್ಟ್ರಭಕ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದರು.