ಮೈಸೂರು: ಕ್ಷತ್ರಿಯ ಸಮುದಾಯ ರಾಜಕೀಯವಾಗಿ ಜಾಗೃತವಾಗಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ಹೇಳಿದರು.
ಕರ್ನಾಟಕ ಕ್ಷತ್ರಿಯ ಒಕ್ಕೂಟ ಜಿಲ್ಲಾ ಮಹಿಳಾ ಘಟಕದಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಪದಗ್ರಹಣ ಹಾಗೂ ಸಮುದಾಯದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಹರಿದು ಹಂಚಿ ಹೋಗಿರುವ ಕ್ಷತ್ರಿಯ ಸಮಾಜ ಒಗ್ಗೂಡಿದರೆ ರಾಜಕೀಯವಾಗಿ ಶಕ್ತಿ ಪಡೆದುಕೊಳ್ಳಬಹುದು ಎಂದರು. ಸಮುದಾಯದ ಶಕ್ತಿ ದಿನೆ ದಿನೇ ಕ್ಷೀಣಿಸುತ್ತಿದೆ. ರಾಜಕಾರಣ ಸೇರಿದಂತೆ ಎಲ್ಲವೂ ಜಾತಿ ವ್ಯವಸ್ಥೆ ಆಧಾರದ ಮೇಲೆ ನಡೆಯುತ್ತಿರುವುದರಿಂದ ನಮ್ಮನ್ನು ಪರಿಗಣಿಸುವವರೇ ಇಲ್ಲವಾಗಿದ್ದಾರೆ ಎಂದು ವಿಷಾದಿಸಿದರು.
ನಮ್ಮೆಲ್ಲ ಒಳಪಂಗಡಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದೇವೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು, ರಾಜಕೀಯವಾಗಿ ಪ್ರಬಲವಾಗಲು ಒಳಪಂಗಡಗಳೆಲ್ಲವೂ ಕ್ಷತ್ರಿಯ ಎನ್ನುವ ಆಲದಮರದಡಿ ಬರಬೇಕು. ಈ ಮೂಲಕ ಸರ್ಕಾರದ ಗಮನಸೆಳೆಯುವ ಕೆಲಸವನ್ನು ಮಾಡಬೇಕು ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಉಮಾ ಮೂರ್ತಿರಾವ್ ಮಾತನಾಡಿ, 36 ಒಳಪಂಗಡಗಳಾಗಿ ಚದುರಿರುವ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸದ್ಯ ನಮ್ಮನ್ನು ಗುರುತಿಸುವವರೇ ಇಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ ಸಂಘಟಿತರಾಗಬೇಕು. ನಮ್ಮ ಆಚರಣೆಗಳನ್ನು ನಾಲ್ಕು ಗೋಡೆಗಳ ನಡುವೆ ಮಾಡಿಕೊಳ್ಳೋಣ. ರಜಪೂತ, ಭಾವಸಾರ, ಮರಾಠಾ ಎಂದು ಹೇಳಿಕೊಳ್ಳದೆ ಎಲ್ಲರೂ ಕ್ಷತ್ರಿಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಸಂಘದ ಪದಾಧಿಕಾರಿಗಳು ಅಧಿಕಾರ ಸ್ಪೀಕರಿಸಿದರು. ನಗರಪಾಲಿಕೆ ಸದಸ್ಯೆ ಶೋಭಾ ಸುನೀಲ್, ಮುಖಂಡರಾದ ಡಾ.ವಾಮನ್ ಬಾಪಟ್, ಭುವನೇಶ್ವರಿ, ಸತ್ಯನಾರಾಯಣ ಸಿಂಗ್, ಸತ್ಯಪ್ಪ, ಮಹದೇವರಾವ್, ಅರುಣ್ ಚವ್ಹಾಣ್, ರಾಮರಾವ್ ಬಾವಲೆ, ಸುನೀಲ್, ಗಣೇಶ್ ಲಾಳಿಗೆ ಇದ್ದರು.