ಜಿಲ್ಲೆ

ರಾಜನಗರ ಮೈದಾನಕ್ಕೆ ಕೆಎಸ್​ಸಿಎ ಅಧ್ಯಕ್ಷ ಭೇಟಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ)ಯ ಅಧ್ಯಕ್ಷ ರಘುರಾಮ ಭಟ್ ಇಲ್ಲಿಯ ರಾಜನಗರ ಮೈದಾನಕ್ಕೆ ಗುರುವಾರ ಭೇಟಿ ನೀಡಿ ರಣಜಿ ಪಂದ್ಯದ ಸಿದ್ಧತೆಗಳನ್ನು ಪರಿಶೀಲಿಸಿದರು.

ಇದೇ ಮೈದಾನದಲ್ಲಿ ಶುಕ್ರವಾರ (ಜ. 5ರಿಂದ)ದಿಂದ ಕರ್ನಾಟಕ-ಪಂಜಾಬ್ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ನಡೆಯಲಿದೆ. ನೆಟ್ಸ್​ನಲ್ಲಿ ಅಭ್ಯಾಸ ನಿರತ ಕರ್ನಾಟಕ ತಂಡದ ಆಟಗಾರರನ್ನು ಅವರು ಭೇಟಿ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯ ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿರುವುದು ಸಂತಸದ ವಿಚಾರ. ಕೆಎಸ್​ಸಿಎ ಧಾರವಾಡ ವಲಯ ಪಂದ್ಯಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದರು.

ಹುಬ್ಬಳ್ಳಿ ಮೈದಾನದಲ್ಲಿನ ಕ್ಲಬ್ ಹೌಸ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎಷ್ಟು ಕಾಮಗಾರಿ ಬಾಕಿ ಉಳಿದಿದೆ ? ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಎಷ್ಟು ಹಣ ಬೇಕಾಗುತ್ತದೆ ಎಂಬುದೆಲ್ಲ ಲೆಕ್ಕಾಚಾರ ಹಾಕಬೇಕಾಗುತ್ತದೆ. ಕ್ಲಬ್ ಹೌಸ್ ನಿರ್ಮಾಣ ಸಣ್ಣ ವಿಚಾರವಲ್ಲ. ಆತುರದಲ್ಲಿ ಕೆಲಸ ಮಾಡುವುದಲ್ಲ. ಕಾಮಗಾರಿ ಪೂರ್ಣಗೊಳಿಸಲು ಸಮಯ ಬೇಕಾಗುತ್ತದೆ ಎಂದರು.

ಗದಗನಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ ಕೆಲಸ ಪ್ರಾರಂಭ ಮಾಡಿದ್ದೇವೆ. ಭೂಮಿ ಸಮತಟ್ಟುಗೊಳಿಸುವ ಕೆಲಸ ನಡೆದಿದೆ. ಮೈದಾನ, ಪಿಚ್ ರೆಡಿ ಆದ ಮೇಲೆ ಕ್ಲಬ್ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕ್ರಿಕೆಟ್ ಮೈದಾನಕ್ಕೆ ಭೂಮಿ ಹಂಚಿಕೆಯಾಗಿದೆ. ಕೆಎಸ್​ಸಿಎ ಹೆಸರಿಗೆ ಸ್ವಾಧೀನ ಪತ್ರ ಆದ ಮೇಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭಿಸಬೇಕಾಗುತ್ತದೆ ಎಂದರು.

ಕೆಎಸ್​ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಸಂಚಾಲಕ ನಿಖಿಲ ಭೂಸದ ಇದ್ದರು.