ಜಿಲ್ಲೆ

ವೈಜ್ಞಾನಿಕವಾಗಿ ಆಲೋಚಿಸುತ್ತಿದ್ದ ಪುಟ್ಟಣ್ಣಯ್ಯ: ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಪ್ರತಾಪ್ ಲಿಂಗಯ್ಯ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ವಿಧಾನಸಭೆ ಅಧಿವೇಶನಗಳಲ್ಲಿ ನಿರರ್ಗಳವಾಗಿ ಮಾತನಾಡುವ ಮೂಲಕ ಹಲವು ಸಮಸ್ಯೆಗಳ ಬಗ್ಗೆ ಸದನದಲ್ಲಿ ಗಮನ ಸೆಳೆಯುತ್ತಿದ್ದರು. ಮಾತ್ರವಲ್ಲದೆ ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಿದ್ದರು ಎಂದು ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಪ್ರತಾಪ್ ಲಿಂಗಯ್ಯ ಬಣ್ಣಿಸಿದರು.

ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಮಂಗಲದ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಹಾಗೂ ನೀನಾಸಂ ತಿರುಗಾಟ ನಾಟಕದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ರಂಗನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುಟ್ಟಣ್ಣಯ್ಯ ಅವರು ರೈತ ಹೋರಾಟಗಾರ ಮಾತ್ರವಲ್ಲದೆ ಕ್ರೀಡೆ, ನಾಟಕ ಸೇರಿದಂತೆ ಹಲವು ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ನೀನಾಸಂ ನಾಟಕಗಳು ಕಳೆದ 25 ವರ್ಷಗಳಿಂದ ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಹಲವಾರು ಸಮಸ್ಯೆಗಳಿಗೆ ನಾಟಕದ ಮೂಲಕ ಪರಿಹಾರ ಕೊಡಿಸಿದೆ. ಸಾವಿರಕ್ಕೂ ಹೆಚ್ಚು ನಾಟಕಗಳನ್ನು ನೀನಾಸಂ ಸಂಸ್ಥೆ ನಿರ್ವಹಣೆ ಮಾಡುತ್ತಾ ಬರುತ್ತಿದೆ. ಹಲವಾರು ಕಲಾವಿದರಿಗೆ ನಿರ್ಮಾಪಕರಾಗಿ ರಂಗಭೂಮಿ ಕಲಾವಿದರನ್ನು ನೀನಾಸಂ ಸಂಸ್ಥೆ ತಯಾರು ಮಾಡಿದೆ. ಈ ಸಂಸ್ಥೆಯಲ್ಲಿ ಅಭಿನಯಿಸಿದ ಕಲಾವಿದರು ದೊಡ್ಡ ವ್ಯಕ್ತಿಗಳಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ. ನಾಟಕಗಳ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಕೆಲಸವಾಗಿದೆ. ಹಲವು ಸಮಸ್ಯೆಗಳಿಗೆ ನಾಟಕದ ಮುಖಾಂತರ ಜಾಗೃತಿ ಮೂಡಿಸುವ ಕೆಲಸ ಮಾಡಿದಾಗ ವೇಗವಾಗಿ ಜನರನ್ನು ತಲುಪುತ್ತದೆ. ಹಲವಾರು ಜನರು ನಾಟಕಗಳಿಂದ ಜೀವನ ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.

ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹೊನ್ನರಾಜು ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಸಾಮಾನ್ಯ ಪುಸ್ತಕವಲ್ಲ. ಬದಲಿಗೆ ಮಹಾನ್ ಗ್ರಂಥ. ಅವರ ಬಗ್ಗೆ ಎಂಟು ದಿನ ಮಾತನಾಡಿದರು ಸಾಲದು. ಅವರು ಅದ್ಬುತ ಶಕ್ತಿ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ರೈತರು ಅಧಿಕಾರಿಗಳ ಮುಂದೆ ಕುಳಿತುಕೊಂಡು ತಮ್ಮ ಸಮಸ್ಯೆಗಳನ್ನು ಅವಶ್ಯಕತೆಗನುಗುಣವಾಗಿ ಪ್ರಶ್ನೆ ಮಾಡುವುದನ್ನು ಕಲಿಸಿಕೊಟ್ಟಿದ್ದು ಪ್ರೊ.ನಂಜುಂಡಸ್ವಾಮಿ ಅವರ ಶಿಷ್ಯ ಕೆ.ಎಸ್.ಪುಟ್ಟಣ್ಣಯ್ಯ ಅವರು ಕೊಟ್ಟ ದೊಡ್ಡ ಕೊಡುಗೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಪುಟ್ಟಣ್ಣಯ್ಯ ಅವರು ಕಲಾವಿದರಾಗಿ, ಕ್ರೀಡಾಪಟು ಹಾಗೂ ಉತ್ತಮ ಭಾಷಣಕಾರರ ಮೇರು ವ್ಯಕ್ತಿತ್ವ ಅವರಲ್ಲಿತ್ತು. ಹಾಸ್ಯ ಮನೆ ಮಾತಾಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕಗಳನ್ನು ಆಡುವವರಿಗೆ 25 ಸಾವಿರ ರೂ ಪ್ರೋತ್ಸಾಹ ಧನ ಸಿಗುತ್ತಿರುವುದು ಪುಟ್ಟಣ್ಣಯ್ಯ ಅವರಿಂದ ಎಂದು ಹೇಳಿದರು.

ಮಂಗಲ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಯೋಗೀಶ್, ಸಾಮಾಜಿಕ ಕಾರ್ಯಕರ್ತ ಸಿ.ಎಂ.ದ್ಯಾವಪ್ಪ ಇತರರಿದ್ದರು. ಇದೇ ವೇಳೆ ಚಂದ್ರಶೇಖರ್ ಕಂಬಾರ ರಚನೆಯ ಕೆ.ಜಿ.ಕೃಷ್ಣಮೂರ್ತಿ ನಿರ್ದೇಶನದ ‘ಹುಲಿಯ ನೆರಳು’ ನಾಟಕ ಜನಸೂರೆಗೊಂಡಿತು.