ಜಿಲ್ಲೆ

ಪ್ರೊ.ಕೆ.ಎಸ್.ಭಗವಾನ್ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಎಚ್ಚರಿಕೆ

ಮಂಡ್ಯ: ಹಿಂದು ಧರ್ಮದ ಪುರಾಣ ಪುರುಷ ಶ್ರೀರಾಮಚಂದ್ರ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಾಹಿತಿ ಕೆ.ಎಸ್.ಭಗವಾನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಒತ್ತಾಯಿಸಿದರು.

ಅ.13ರಂದು ಮೈಸೂರಿನ ಪುರಭವನದಲ್ಲಿ ಆಯೋಜಿಸಿದ್ದ ಮಹಿಷ ಉತ್ಸವದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದೇಳುವ ಮೂಲಕ ಸಮುದಾಯವನ್ನು ಅಪಮಾನಿಸಿದ್ದಾರೆ. ಶತಮಾನದಿಂದ ಮತ್ತು ಪುರಾಣದಲ್ಲಿಯೂ ನಮ್ಮ ಒಕ್ಕಲಿಗ ಸಮುದಾಯವು ಸಂಸ್ಕೃತಿ, ಪರಂಪರೆ, ನಾಗರಿಕತೆ ಅವರ ಸೌಜನ್ಯಪೂರಿತ ಸುಸಂಸ್ಕೃತ ಸಂಸ್ಕಾರದ ಬಗ್ಗೆ ಉಲ್ಲೇಖವಿರುತ್ತದೆ. ಒಕ್ಕಲಿಗ ಸಮುದಾಯದಿಂದ ರಾಷ್ಟ್ರಕೂಟರು, ಗಂಗರು ಇಡೀ ಭಾರತದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ. ಕೆಂಪೇಗೌಡರು ಆಳಿದಂತಹ ಈ ಮಣ್ಣಿನಲ್ಲಿ ಒಕ್ಕಲಿಗರ ಸ್ವಾಭಿಮಾನ ಮತ್ತು ಒಕ್ಕಲಿಗರ ಭಾವನೆಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲು ಭಗವಾನ್‌ಗೆ ಯಾವ ನೈತಿಕತೆ ಇದೆ. ಮಹಿಷ ದಸರಾ ಆಚರಣೆ ಸಂಬಂಧ ಮಾತ್ರ ಮಾತನಾಡಬೇಕಿತ್ತು. ಅದು ಬಿಟ್ಟು ಬೇರೆ ಬೇರೆ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಅಗತ್ಯವಾದರೂ ಏನಿತ್ತು?. ಮಾತನಾಡುವ ಅಥವಾ ಇಂತಹ ಮಾತುಗಳಿಂದ ಪುಕ್ಕಟ್ಟೆ ಪ್ರಚಾರ ಪಡೆಯಬೇಕಾದರೆ ಬೇರೆ ವಿಚಾರಗಳನ್ನು ಮಾತನಾಡಿ. ಅದು ಬಿಟ್ಟು ಸಮುದಾಯಗಳ ಬಗ್ಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಸಮುದಾಯವನ್ನು ಅಪಮಾನಿಸಿರುವ ಕೆ.ಎಸ್.ಭಗವಾನ್ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ನಾಗೇಶ್, ಕೆಂಪರಾಜು, ಸ್ವಾಮಿಗೌಡ, ಕೇಶವ, ರಾಕೇಶ್, ವೀರೇಶ್, ತಮ್ಮೇಗೌಡ ಇದ್ದರು.