ಕುಂಬಳೆ: ಇಹಲೋಕದ ಶ್ರದ್ಧೆಯ ಸಾಧನೆಗಳು ಸಾವಿನ ನಂತರವೂ ಜೀವಂತವಿರುತ್ತದೆ. ವಿತ್ತಾಪಹಾರಕರಾಗದೆ, ಚಿತ್ತಾಪಹಾರಕರಾಗಿ ಮಾಡಿದ ಜೀವಮಾನ ಸಾಧನೆಗಳು ವ್ಯಕ್ತಿಯ ಬದುಕಿನ ಸಾರ್ಥಕತೆ ಎಂದು ಯಕ್ಷಗಾನ ಪ್ರಸಂಗಕರ್ತ, ಭಾಗವತ ಸೇಡಿಗುಮ್ಮೆ ವಾಸುದೇವ ಭಟ್ ತಿಳಿಸಿದರು.
ಸಹಕಾರಿ ಧುರೀಣ ದಿ.ಎಚ್.ವಿಷ್ಣು ಭಟ್ ಕುರಿತು ರಚಿಸಿರುವ ಸಂಸ್ಮರಣಾ ಸಂಪುಟ ಕಾಯಕ ತಪಸ್ವಿ ವಿಷ್ಣು ಮಾಸ್ಟ್ರು ಕೃತಿಯನ್ನು ಭಾನುವಾರ ಸೂರಂಬೈಲಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಕೃತಿಯ ಬಗ್ಗೆ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಭಿನಂದನೆ-ಸಂಸ್ಮರಣಾ ಗ್ರಂಥಗಳಿಗಳಿಗೆ ಅದರದ್ದೇ ಆದ ಮಹತ್ವವಿದ್ದು, ಇಲ್ಲಿ ಬಿಡುಗಡೆಯಾದ ಕೃತಿ ಆಗಿಹೋದ ಮಹನೀಯರ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ವಿಶಿಷ್ಟವೆನಿಸುತ್ತದೆ ಎಂದರು.
ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಕೃತಿ ಸಂಪಾದಕ ಸಾಹಿತಿ ಎಸ್.ಕೆ.ಗೋಪಾಲಕೃಷ್ಣ ಭಟ್, ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಶಿವರಾಮ ಭಟ್ ಹಾಗೂ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಚ್.ಶಂಕರನಾರಾಯಣ ಭಟ್, ಸದಾಶಿವ ಭಟ್ ಸೇಡಿಗುಮ್ಮೆ ಶುಭಾಶಂಸನೆಗೈಯ್ದರು. ಭಾರತೀಯ ಭೂಸೇನೆಯ ಲೆಪ್ಟಿನೆಂಟ್ ಅಧಿಕಾರಿ ಅಜಿತೇಶ್ ಅವರನ್ನು ಸನ್ಮಾನಿಸಲಾಯಿತು. ಕವಯಿತ್ರಿ ಸರಸು ಡಿ.ಕಮ್ಮರಡಿ ಸ್ವಾಗತಿಸಿ, ಗೀತಾ ಭಟ್ ವಂದಿಸಿದರು. ವಿದ್ಯಾ ಭಟ್ ನಿರೂಪಿಸಿದರು.