ಮಂಡ್ಯ: ಕೃಷಿಯಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ ವಿಜ್ಞಾನಿಗಳು ಪರಿಚಯಿಸುವ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸಲಹೆ ನೀಡಿದರು.
ತಾಲೂಕಿನ ವಿ.ಸಿ.ಫಾರ್ಮ್‌ನಲ್ಲಿ ಆಯೋಜಿಸಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಮೀನು ಹೊಂದಿರುವ ಶ್ರೀಮಂತ ಮಾಲೀಕರು ಕೃಷಿಯನ್ನು ಕಾರ್ಮಿಕರ ಸಹಾಯದಿಂದ ಹವ್ಯಾಸಕ್ಕಾಗಿ ನಡೆಸುತ್ತಾರೆ. ಆದರೆ ಪೂರ್ಣ ಕುಟುಂಬ ಕೃಷಿಯಲ್ಲೇ ತೊಡಗಿಕೊಂಡು ಜೀವನ ನಡೆಸುತ್ತಿರುವವರಿಗೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕು. ಸರ್ಕಾರ ಒದಗಿಸುವ ಸವಲತ್ತುಗಳು ಅವರಿಗೆ ತಲುಪಬೇಕು ಎಂದರು.
ಕೃಷಿ ಮೇಳದಲ್ಲಿ ಹಲವಾರು ಸುಧಾರಿತ ತಳಿ, ಯಾವ ರೀತಿ ಕೆಲವು ಹೊಸ ಮಾದರಿಯನ್ನು ಅಳವಡಿಸಿಕೊಂಡು ರೈತರು ಜೀವನ ಕಟ್ಟಿಕೊಳ್ಳಬಹುದು ಎಂದು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಲಾಗಿದೆ. ರೈತರು ಮೇಳದಲ್ಲಿ ಮಾಹಿತಿ ಪಡೆದುಕೊಂಡು ಅರ್ಥೈಸಿಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಅತ್ಯಾಧುನಿಕ ಕೃಷಿ ಯಂತ್ರೋಪಕರಣ, ಹೆಚ್ಚು ಇಳುವರಿ ಹಾಗೂ ಆದಾಯ ತಂದು ಕೊಡುವ ಸುಧಾರಿತ ತಳಿಗಳನ್ನು ಅನಾವರಣಗೊಳಿಸಲಾಗಿದೆ. ವಿ.ಸಿ.ಫಾರ್ಮ್‌ನಲ್ಲಿ ನಿರಂತರವಾಗಿ ರೈತರ ಅಭಿವೃದ್ಧಿಗಾಗಿ ವಿವಿಧ ಸಂಶೋಧನಾ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಂಡ್ಯ ಕೃಷಿ ಆಧಾರಿತ ಜಿಲ್ಲೆ. ಇಲ್ಲಿ ಸಣ್ಣ ಇಳುವರಿದಾರರು ಹೆಚ್ಚು. ಹೀಗಾಗಿ ಕೃಷಿ ಯಂತ್ರೋಪಕರಣವನ್ನು ಖರೀದಿಸುವುದು ಕಷ್ಟಕರ. ಪ್ರತಿ ಗ್ರಾಮದಲ್ಲಿ 4 ರಿಂದ 5 ಜನರು ಒಟ್ಟಾಗಿ ಸೇರಿ ಖರೀದಿಸಿ ಉಪಯೋಗಿಸಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ, ಕೃಷಿ ಮೇಳದಲ್ಲಿ ಸುಧಾರಿತ ಹಾಗೂ ಬಿಡುಗಡೆಗೆ ಸಿದ್ಧವಿರುವ ತಳಿಗಳನ್ನು ಅನಾವರಣಗೊಳಿಸಲಾಗಿದೆ. ರೈತರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಎರಡು ದಿನದ ಮೇಳದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಇರುವ ತಳಿಗಳು, ಬೆಳೆಗಳು, ಮೇವಿನ ಬೆಳೆಗಳು. ನೀರು ನಿರ್ವಹಣಾ ತಂತ್ರಜ್ಞಾನ, ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತಿದೆ. ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಗಾಣದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪರಾಣಿ, ವಿ.ಸಿ ಫಾರ್ಮ್ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಎಸ್. ಪ್ರಕಾಶ್, ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಕೆ.ಬಿ.ಉಮೇಶ್, ಪ್ರಾಧ್ಯಾಪಕ ಡಾ.ರಂಗನಾಥ, ಜಂಟಿ ಕೃಷಿ ನಿರ್ದೇಶಕ ಅಶೋಕ್ ಇತರರಿದ್ದರು.