ಜಿಲ್ಲೆ

ಕೃಷಿ ಮೇಳದಲ್ಲಿ ಪಾಲ್ಗೊಂಡು ಅರಿವು ಪಡೆಯಿರಿ

Kolar

ಕೋಲಾರ: ಸುಸ್ಥಿರ ಕೃಷಿ ಅಭಿವೃದ್ಧಿಯ ಧ್ಯೇಯದೊಂದಿಗೆ ಫೆ 21ರಿಂದ 23ರವರೆಗೆ ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24/7 ನ್ಯೂಸ್ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಕೃಷಿ ಮೇಳಕ್ಕೆ ಜಿಲ್ಲೆಯ ರೈತರನ್ನು ಸಂಘಟಿಸಲು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಅನ್ನದಾತರು ಮತ್ತು ಕೃಷಿ ಕೂಲಿಕಾರ್ಮಿಕ ವರ್ಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದ ಎಂ.ಜಿ. ರಸ್ತೆಯ ಗಾಂಧಿವನದ ಬಳಿ ಹಸಿರುಶಾಲು ತಿರುಗಿಸಿ ನೇಗಿಲು ಹೊತ್ತ ರೈತನನ್ನು ಒಳಗೊಂಡ ಎತ್ತಿನ ಬಂಡಿಗೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಚಾಲನೆ ನೀಡಿದರು. ಆರಂಭದಿಂದ ಕಡೆಯಯವರೆಗೂ ತಾವೇ ಎತ್ತಿನ ಬಂಡಿ ಓಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ರೈತರು ಟ್ರ್ಯಾಕ್ಟರ್‌ನಲ್ಲಿ ಬಂದು ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿ, ಕೋಲಾರ ಅತಿ ಹೆಚ್ಚು ರೈತರನ್ನು ಒಳಗೊಂಡಿರುವ ಜಿಲ್ಲೆ. ಇಲ್ಲಿನ ರೈತರು ಕೃಷಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿ ಎಲ್ಲ ಚಟುವಟಿಕೆಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಜಿಲ್ಲೆಯಿಂದ ಹೆಚ್ಚಿನ ರೈತರು ಭಾಗವಹಿಸಿ ತಂತ್ರಜ್ಞಾನಗಳ ಕುರಿತಾಗಿ ಹೆಚ್ಚಿನ ತಿಳಿವಳಿಕೆ ಪಡೆದು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ರೈತ ಸಂಘದ ಮಹಿಳಾ ಘಟಕ ಅಧ್ಯಕ್ಷೆ ನಳಿನಿಗೌಡ ಮಾತನಾಡಿ, ಜಿಲ್ಲೆಯ ರೈತರು ಅತಿ ಹೆಚ್ಚು ಹಣ್ಣು ತರಕಾರಿ, ಟೊಮ್ಯಾಟೊ ಬೆಳೆದು ದೇಶದ ಉದ್ದಗಲಕ್ಕೂ ರವಾನಿಸುವ ಮೂಲಕ ಪ್ರಸಿದ್ಧಿ ಪಡೆದಿದೆ. ಮೈಸೂರಿನಲ್ಲಿ ನಡೆಯುವ ಮೇಳದಲ್ಲಿ ಭಾಗವಹಿಸಿ ಅರಿವು ಪಡೆಯಬೇಕು ಎಂದು ಕೋರಿದರು.

ಪ್ರೊ.ನಂಜುಂಡಸ್ವಾಮಿ ಬಣದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಎನ್.ತ್ಯಾಗರಾಜ್, ರೈತ ಮುಖಂಡ ಮಂಗಸಂದ್ರ ನಾಗೇಶ್, ನಗರಸಭೆ ಸದಸ್ಯ ಎಸ್.ಆರ್. ಮುರಳಿಗೌಡ, ಕರವೇ ತಾಲೂಕು ಯುವ ಘಟಕ ಅಧ್ಯಕ್ಷ ನವೀನ್ ಮಾತನಾಡಿ, ಕೃಷಿ ಮೇಳದಲ್ಲಿ ರೈತರು ಎದುರಿಸುತ್ತಿರುವ ಭೂಮಿ, ನೀರಿನ ಸಮಸ್ಯೆ, ಬೆಳೆಗೆ ಸೂಕ್ತ ಬೆಲೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಲಿ, ಜಿಲ್ಲೆಯಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು ಎಂದರು.

ವಿಜಯವಾಣಿ ಹಿರಿಯ ವರದಿಗಾರ ಪಾ.ಶ್ರೀ.ಅನಂತರಾಮ್ ಮಾತನಾಡಿ, ಕೃಷಿ ಮೇಳಕ್ಕೆ ತೆರಳಲಿಚ್ಚಿಸುವ ರೈತರಿಗೆ ಫೆ 21ರಂದು ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ಬಸ್ ಹಾಗೂ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಬೆಳಗ್ಗೆ 6 ಗಂಟೆಗೆ ಹಾಜರಿರಬೇಕು ಎಂದು ಕೋರಿದರು.

ರೈತರ ಸಂಘದ ಜಿಲ್ಲಾಧ್ಯಕ್ಷ ರಾಮುಶಿವಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ನಾಗರಾಜ್, ಅಶೋಕ್, ರಾಜಕಲ್ಲಹಳ್ಳಿ ಅಯ್ಯಪ್ಪ, ನಾಗನಾಳ ಶ್ರೀನಿವಾಸ್, ಸುಪ್ರೀಂಚಲ, ಜಗದೀಶ್, ಸುಧಾಕರ್, ಅಶ್ವತ್ಥಪ್ಪ, ತಿಮ್ಮಣ್ಣ, ವಿನೋದ್, ದೊಡ್ಡಕುರುಬರಹಳ್ಳಿ ಶಂಕರಪ್ಪ, ಪುಟ್ಟರಾಜು, ರಘು, ಮಂಜುನಾಥ್, ಬಿಜೆಪಿ ಮುಖಂಡರಾದ ಶ್ರೀನಾಥ್, ನಾಮಾಲ ಮಂಜುನಾಥ್, ನವೀನ್, ಕರವೇ ನಗರಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಸುನೀಲ್, ಛಾಯಾಗ್ರಾಹಕ ಶ್ಯಾಮ್, ಮಹೇಶ್‌ರಾವ್ ಕದಂ, ಕೆಪಿಆರ್‌ಎಸ್ ಮುಖಂಡರಾದ ಶ್ರೀರಾಮ್, ರಮಣ, ಯಲ್ಲಪ್ಪ ಇತರರಿದ್ದರು. ರ‌್ಯಾಲಿ ವೇಳೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿವಿಧ ಸ್ಪರ್ಧೆ ಆಯೋಜನೆ: ಕೃಷಿ ಮೇಳದ ಅಂಗವಾಗಿ ರೈತರಿಗೆ ದೇಸಿ ಕ್ರೀಡೆಗಳು, ವೇಷಭೂಷಣ ಸ್ಪರ್ಧೆ, ರಂಗೋಲಿ, ಜನಪರ ನೃತ್ಯ, ರಾಗಿ ಮುದ್ದೆ, ಬಾಳೆಹಣ್ಣು, ಕಡಲೆಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಜಿಲ್ಲೆಯಿಂದ ಹೆಚ್ಚಿನ ರೈತರು ಸ್ಪರ್ಧೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು. ಕೃಷಿ ಮೇಳ ಜಾತ್ರೆ ಅಥವಾ ಸಂತೆ ರೂಪದಲ್ಲಿ ನಡೆಸಲಾಗುತ್ತಿಲ್ಲ. ರೈತರ ಅಭಿವೃದ್ಧಿಗೆ ಮತ್ತು ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದ್ದು, ಕೃಷಿ ತಜ್ಞರು ನೀಡುವ ಸಲಹೆಗಳಿಂದ ಪ್ರಯೋಜನ ಪಡೆಯಲು ಸಹಕಾರಿಯಾಗಲಿದೆ ಎಂದು ವಿಜಯವಾಣಿ ಜಿಲ್ಲಾ ವರದಿಗಾರ ಪಾ.ಶ್ರೀ.ಅನಂತರಾಮ್ ಹೇಳಿದರು.