ಹುಬ್ಬಳ್ಳಿ: ರಾಜ್ಯದಲ್ಲಿ ಬೇಸಿಗೆ ಬಿಸಿ ಹೆಚ್ಚಿಸಿದ್ದ ಚುನಾವಣೆ ಕಾವು ಇದೀಗ ಆರಿದ್ದು, ಸ್ವತಂತ್ರವಾಗಿ ಒಂದೇ ರಾಜಕೀಯ ಪಕ್ಷ ಆಡಳಿತ ನಡೆಸಲು ಮತದಾರ ಪ್ರಭು ಅಪ್ಪಣೆ ಮಾಡಿದ್ದಾನೆ. ಕಳೆದೊಂದು ತಿಂಗಳಿಂದ ಚುನಾವಣೆ ಗುಂಗಿನಲ್ಲಿದ್ದ ಜನರು ಈಗಷ್ಟೇ ಹೊರಬರುತ್ತಿದ್ದಾರೆ. ಕೃಷಿ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳಿಂದ ಬಹುತೇಕ ದೂರವಿದ್ದ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳಿಗೆ ಮರಳುತ್ತಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿ, ಪಕ್ಷದ ಪರ ಪಾದಯಾತ್ರೆ, ಮನೆಮನೆ ಭೇಟಿ, ಸಾರ್ವಜನಿಕ ಸಭೆ ಇತ್ಯಾದಿ ಕಾರ್ಯಗಳಲ್ಲಿಯೇ ಬಿಜಿಯಾಗಿದ್ದ ಕೃಷಿ ಕಾರ್ಮಿಕರು ಸಹ ಜಮೀನುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕೃಷಿ ಹಾಗೂ ತೋಟಗಾರಿಕೆ ಕೆಲಸ ಮಾಡುವ ಕೂಲಿ ಕಾರ್ಮಿಕರು ಚುನಾವಣೆ ಪ್ರಚಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೋಗಿದ್ದರು. ಇದರಿಂದ ಕೃಷಿ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಕಾರ್ಮಿಕರ ಕೊರತೆ ಎದುರಿಸಿತ್ತು. ಬಹಳಷ್ಟು ಹಳ್ಳಿಗಳಲ್ಲಿ ನರೇಗಾ ಕೆಲಸಕ್ಕೂ ಜನರು ಸಿಗದೇ ತೊಂದರೆಯಾಗಿತ್ತು. ಮುಂಗಾರು ಪೂರ್ವ ಮಳೆ ಒಂದಿಷ್ಟು ತಂಪು ನೀಡಿರುವುದರಿಂದ ಕೃಷಿ ಕ್ಷೇತ್ರ ಮೈಕೊಡವಿಕೊಂಡಿದೆ.
ಈಗಾಗಲೇ ಎಲ್ಲೆಲ್ಲಿ ಮಳೆಯಾಗಿದೆಯೋ ಅಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಮುಂಗಾರು ಹಂಗಾಮಿಗೆ ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಮಾನ್ಸೂನ್ ಮಾರುತಗಳು ಈ ವರ್ಷ ಎಷ್ಟು ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮುಂದಿನ ವಾರದಲ್ಲಿ ನೀಡಲಿದ್ದು, ಅದರ ಆಧಾರದಲ್ಲಿ ಯಾವ ಬೆಳೆ ಸೂಕ್ತ ಎಂದು ರೈತರು ತೀರ್ಮಾನ ಮಾಡಲಿದ್ದಾರೆ. ಹಾಗಾಗಿ ಸದ್ಯ ಆಗಿರುವ ಮಳೆಯಲ್ಲೇ ಕೃಷಿ ಕಾರ್ಯಗಳನ್ನು ರೈತರು ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆಯ ಕೊರತೆ ಕಾಡುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಗುತ್ತಿತ್ತು. ಆದರೆ, ಈ ವರ್ಷ ಮಳೆಯ ಕೊರತೆ ಇದೆ. ಕಳೆದ ವಾರವಷ್ಟೇ ಸೈಕ್ಲೋನ್ ಎೆಕ್ಟ್‌ನಿಂದ ಒಂದೆರಡು ಬಾರಿ ಮಳೆ ಸುರಿದಿದ್ದು ಬಿಟ್ಟರೆ ಮತ್ತೆ ವರುಣನ ದರ್ಶನವಿಲ್ಲ. ಮುಂಗಾರು ಪೂರ್ವದಲ್ಲಿ ಹೊಲ ಹದಗೊಳಿಸಲು ಮಳೆ ಬೇಕಾಗಿತ್ತು. ಏಪ್ರಿಲ್, ಮೇ ಅವಧಿಯಲ್ಲಿ ಧಾರವಾಡ ಜಿಲ್ಲೆಯು ಸಾಮಾನ್ಯವಾಗಿ 80 ಮಿಲಿ ಮೀಟರ್ ಮಳೆ ಪಡೆಯುತ್ತದೆ. ಈ ಬಾರಿ ಅಷ್ಟಾಗಿಲ್ಲ. ಹುಬ್ಬಳ್ಳಿ ತಾಲೂಕಿನ ಹಲವು ಕಡೆಗಳಲ್ಲಿ ಮಳೆ ಆಗಿಲ್ಲ. ರೆಂಟೆ, ಕುಂಟೆ ಹೊಡೆಯಲು ಹೆಚ್ಚು ಮಳೆ ಬೇಕಾಗಿತ್ತು. ಹೆಚ್ಚಿನ ಮಳೆಯಾದರೆ ಉಳುಮೆ ಉತ್ತಮವಾಗಲಿದೆ ಎಂದು ಅಮರಗೋಳ, ಉಣಕಲ್ಲ ಭಾಗದ ರೈತರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯ ನಿರೀಕ್ಷೆ ಇದ್ದು, ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಸದ್ಯ ರೈತರು ಜಮೀನು ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಮೇ ಕೊನೇ ಅಥವಾ ಜೂನ್ ಮೊದಲ ವಾರ ಬಿತ್ತನೆ ಕಾರ್ಯ ಆರಂಭಿಸುವ ಸಾಧ್ಯತೆ ಇದೆ.ಶಿವನಗೌಡ ಪಾಟೀಲ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಧಾರವಾಡ