ಕೊರಟಗೆರೆ: ದಾಖಲೆಗಳಲ್ಲಷ್ಟೇ ಇದೊಂದು ಗ್ರಾಮ ಎನಿಸಿಕೊಂಡಿದೆ. ಆದರೆ, ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ಆಡಳಿತ ನಡೆಸುವವರ ಅವಕೃಪೆಗೆ ಒಳಗಾಗಿದೆ ಈ ಹಳ್ಳಿ.... ಹೌದು, ಕೊರಟಗೆರೆ ತಾಲೂಕಿನಿಂದ 8 ಕಿ.ಮೀ ದೂರವಿರುವ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ‘ಹುಲ್ಲುಗಾನಹಳ್ಳಿ’ 30 ಮನೆಗಳಿರುವ ಪುಟ್ಟ ಗ್ರಾಮ. 150ಕ್ಕೂ ಹೆಚ್ಚು ಜನರಿದ್ದಾರೆ. ಎಲ್ಲರೂ ಕೃಷಿ ನಂಬಿಯೇ ಬದುಕು ಕಟ್ಟಿಕೊಂಡವರು. ಭೋವಿ, ಕುರುಬ ಹಾಗೂ ಒಕ್ಕಲಿಗ ಸಮುದಾಯದ ಜನರು ಮೂಲಸೌಕರ್ಯ ವಂಚಿತರಾಗಿದ್ದರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ.
ಸಾರಿಗೆ ಸೌಲಭ್ಯವಿಲ್ಲ: ಕಾಮರಾಜನಹಳ್ಳಿ ಹಾಗೂ ಗುಂಡಿನಪಾಳ್ಯ ಕಡೆಯಿಂದ ಹುಲ್ಲುಗಾನಹಳ್ಳಿ ಸಂಪರ್ಕಿಸಲು ಸಾಧ್ಯವಿದೆ. ಒಂದು ರಸ್ತೆ ಪಕ್ಕಾ ರಸ್ತೆಯಾಗಿದ್ದು, ಗುಂಡಿಪಾಳ್ಯದಿಂದ ಸಂಪರ್ಕಿಸುವ ರಸ್ತೆಯಲ್ಲಿ ಆಳುದ್ದದ ಗುಂಡಿಗಳು ಹೆಚ್ಚಾಗಿವೆ. ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ. ಇಲ್ಲಿನ ಜನರು, ಪಟ್ಟಣಕ್ಕೆ ತೆರಳುವಾಗ ಪ್ಯಾಸೆಂಜರ್ ಆಟೋ, ಬೈಕ್ ಅಥವಾ ಕಾಲ್ನಡಿಗೆಯಲ್ಲಿಯೇ ತೆರಳುತ್ತಾರೆ. ಮಕ್ಕಳು ಶಾಲಾ-ಕಾಲೇಜುಗಳಿಗೆ, ಜನರು ಆಸ್ಪತ್ರೆಗೆ ತೆರಳಲು ಈ ಮಾರ್ಗದಲ್ಲಿ ಬಸ್ ಸಂಚಾರದ ಅಗತ್ಯವಿದೆ.
ಹುಲೀಕುಂಟೆಯಿಂದ 2 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ಚರಂಡಿ, ರಸ್ತೆ ವ್ಯವಸ್ಥೆಯಾಗಿಲ್ಲ. ಮತ ಕೇಂದ್ರಿತವಾಗಿಯೇ ಅಭಿವೃದ್ಧಿ ನಡೆಸುವ ರಾಜಕಾರಣಿಗಳು ಇಲ್ಲಿ ಮತದಾರರು ಕಡಿಮೆ ಇರುವ ಕಾರಣಕ್ಕೆ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂಬ ದೂರು ಇಲ್ಲಿನ ಜನರದ್ದು. ವರ್ಷಕ್ಕೊಮ್ಮೆಯೂ ಚರಂಡಿಗಳನ್ನು ಶುಚಿಗೊಳಿಸುತ್ತಿಲ್ಲ. ಸರಾಗವಾಗಿ ಕೊಳಚೆ ನೀರು ಹರಿಯದೆ ಅನೈರ್ಮಲ್ಯ ತಾಂಡವವಾಡುತ್ತಿದೆ. ಹಾಗಾಗಿ, ಸಾಂಕ್ರಾಮಿಕ ರೋಗ ಇಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ.
92 ವರ್ಷದ ವೃದ್ಧೆ ನಾಗಮ್ಮ ಎಂಬುವವರ ಮನೆ ಇತ್ತೀಚೆಗೆ ಭಾರಿ ಮಳೆಗೆ ಕುಸಿದುಬಿದ್ದು ಬದುಕು ಬೀದಿಗೆ ಬಂದಿದೆ. ಇವರಂತೆಯೇ ಗ್ರಾಮದಲ್ಲಿ ಕೆಲವು ಮನೆಗಳು ಬಿದ್ದಿದ್ದರೂ ಸರ್ಕಾರದ ಪರಿಹಾರ ತಲುಪಿಲ್ಲ. ಸರ್ಕಾರಿ ಶಾಲೆ ಮುಂಭಾಗದ ನೀರಿನ ತೊಟ್ಟಿ ಶುಚಿಗೊಳಿಸುವ ಕಾರ್ಯಕ್ಕೂ ಗ್ರಾಪಂ ಕೈ ಹಾಕಿಲ್ಲ. ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡಲು 2 ಕಿರುಘಟಕಗಳಿದ್ದು, ಇದರ ಸ್ವಚ್ಛತೆಯೂ ಅಪರೂಪಕ್ಕೊಮ್ಮೆ ಆಗುತ್ತಿದೆ.
ವೃದ್ಧರ ಗ್ರಾಮವಿದು... ; ಗ್ರಾಮದ ಯುವಕರು ಉದ್ಯೋಗಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗಿದ್ದು, ವೃದ್ಧರಷ್ಟೇ ಗ್ರಾಮದಲ್ಲಿ ಹೆಚ್ಚಾಗಿ ಕಾಣಿಸುವುದರಿಂದ ಇದೊಂದು ವೃದ್ಧರ ಗ್ರಾಮದಂತೆ ಭಾಸವಾಗುತ್ತದೆ. ವೃದ್ಧರು, ಮಕ್ಕಳು, ಮಹಿಳೆಯರೇ ಹೆಚ್ಚಾಗಿರುವ ಈ ಗ್ರಾಮದ ಬಗ್ಗೆ ಜನಪ್ರತಿನಿಧಿಗಳು ಆರಂಭದಿಂದಲೂ ತಾತ್ಸಾರ ಮಾಡಿದ್ದಾರೆ. ಹಾಗಾಗಿ, ಮೂಲಸೌಕರ್ಯ ಮರೀಚಿಕೆಯಾಗಿದೆ. ಗ್ರಾಪಂ ಕಡಿಮೆ ಅನುದಾನದಲ್ಲಿಯೂ ಇಲ್ಲಿನ ಜನರ ಬೇಡಿಕೆ ಈಡೇರಿಸಲು ಸಾಧ್ಯವಿದ್ದು ಇಚ್ಛಾಶಕ್ತಿ ತೋರಬೇಕಿದೆ. ಶಾಸಕ ಡಾ.ಜಿ.ಪರಮೇಶ್ವರ ಬಿಡುವು ಮಾಡಿಕೊಂಡು ಈ ಕುಗ್ರಾಮಕ್ಕೊಮ್ಮೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂಬ ಮನವಿ ಗ್ರಾಮಸ್ಥರದ್ದು.
ನಮ್ಮೂರಲ್ಲಿ ಚರಂಡಿ, ನೀರಿನ ಟ್ಯಾಂಕ್ ಕ್ಲೀನ್ ಮಾಡಿದ್ದೇ ನೋಡಲಿಲ್ಲ. ಮಕ್ಕಳು ಕುಡಿಯೋ ನೀರು ಅಂದ್ರೂ ಟ್ಯಾಂಕ್ ತೊಳೆಯುತ್ತಿಲ್ಲ. ಎಲೆಕ್ಷನ್ ಬಂದಾಗಲಷ್ಟೇ ನಮ್ಮೂರಿಗೆ ಬಿಳಿ ಅಂಗಿ ತೊಟ್ಟ ದೊಡ್ಡವರು ಬರೋದು. ಹರಿಯಮ್ಮ, ಗ್ರಾಮಸ್ಥೆ ಜಾತಿಗಣತಿ ದಾಖಲೆಯಲ್ಲಿ 150ಕ್ಕೂ ಹೆಚ್ಚು ಜನರು ಗ್ರಾಮದಲ್ಲಿದ್ದಾರೆ. ಆದರೂ, ವಾಸ್ತವದಲ್ಲಿ ಬಹುತೇಕರು ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಇರುವ ಶಾಲೆಯಲ್ಲಿ 1ನೇ ತರಗತಿಗೆ ಮೂವರು, 2ನೇ ತರಗತಿಯಲ್ಲಿ ಒಂದು ಮಗು ಸೇರಿ ಒಟ್ಟು ನಾಲ್ಕು ಮಕ್ಕಳಿದ್ದಾರೆ. ಅಂಗನವಾಡಿಗೆ ಹೋಗುವ 5 ಮಕ್ಕಳು ಮುಂದಿನ ವರ್ಷ ಒಂದನೇ ತರಗತಿಗೆ ಸೇರುವ ಸಾಧ್ಯತೆಯಿದೆ. ನರೇಂದ್ರ ಬಾಬು, ಸರ್ಕಾರಿ ಶಾಲೆ ಶಿಕ್ಷಕ, ಹುಲ್ಲುಗಾನಹಳ್ಳಿ