ಜಿಲ್ಲೆ

ಕೆಆರ್‌ಎಸ್ ಜಲಾಶಯ ಭರ್ತಿ: ಮುಂದಿನ ಬೇಸಿಗೆವರೆಗೂ ರಾಜಧಾನಿಗಿಲ್ಲ ಜಲ ಸಮಸ್ಯೆ

ಬೆಂಗಳೂರು: ರಾಜಧಾನಿಗೆ ಕುಡಿಯುವ ನೀರಿನ ಆಸರೆಯಾಗಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯ ಪೂರ್ಣ ಭರ್ತಿಯಾಗಿದ್ದು, ಮುಂದಿನ ಬೇಸಿಗೆವರೆಗೂ ನಗರವಾಸಿಗಳಿಗೆ ಜಲ ಸಮಸ್ಯೆ ಉಂಟಾಗದು. ಈ ಬೆಳವಣಿಗೆಯಿಂದಾಗಿ ಜಲಮಂಡಲಿ ನಿಟ್ಟಿಸಿರು ಬಿಡುವಂತಾಗಿದೆ.

ಈ ವರ್ಷದ ಬೇಸಿಗೆ ವೇಳೆ ನಗರದಲ್ಲಿ ಕುಡಿಯುವ ನೀರಿಗೆ ಭಾರೀ ಹಾಹಾಕಾರ ಉಂಟಾಗಿ ಜನರು ಪರದಾಡಿದ್ದರು. ಅದರಲ್ಲೂ ಹೊರವಲಯದಲ್ಲಿ ಹಣ ನೀಡಿ ನೀರನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿತ್ತು. ದಶಕಗಳ ಬಳಿಕ ಬೆಂಗಳೂರು ನಗರದಲ್ಲಿ ಕಂಡುಕೇಳರಿಯದ ಸಮಸ್ಯೆಯಲ್ಲಿ ಸಿಲುಕಿದ ವೇಳೆ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕಿ ಜೀವಜಲ ಪೂರೈಸುವಂತೆ ಪ್ರತಿಭಟನೆ ಕೂಡ ನಡೆಸಿದ್ದರು.

ಇದರ ಜತೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿಯೂ ಸಕಾಲದಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲು ವಿಳಂಬ ಆಗಿತ್ತು. ಇದರಿಂದಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಮಟ್ಟಿಗೆ ಜಲಕ್ಷಾಮ ಉಂಟಾಗಿ ಸಾರ್ವಜನಿಕರು ಹನಿ ನೀರನ್ನು ಜೋಪಾನ ಮಾಡುವಂತಾಗಿತ್ತು. ಆದರೆ, ಈ ವರ್ಷ ಮುಂಗಾರು ಉತ್ತಮ ಮಳೆ ಸುರಿಸಿದ ಪರಿಣಾಮ ಜುಲೈ ತಿಂಗಳಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವುದು ಮೈಸೂರು- ಬೆಂಗಳೂರು ಮಾರ್ಗದುದ್ದಕ್ಕೂ ಇರುವ ನಗರ, ಪಟ್ಟಣಗಳು ಜಲ ಸಮಸ್ಯೆಯಿಂದ ಪಾರಾದಂತಾಗಿದೆ. ಇದು ಆ ಭಾಗದ ಜನರಿಗೂ ಸಂತಸ ಮೂಡಿಸಿದೆ.

ರಾಜಧಾನಿಗೆ 24 ಟಿಎಂಸಿ ನೀರು ಲಭ್ಯ:

ಬೆಂಗಳೂರು ನಗರಕ್ಕೆ ಸದ್ಯ ಪ್ರತಿನಿತ್ಯ 1,450 ಎಂಎಲ್‌ಡಿ ಪ್ರಮಾಣದಷ್ಟು ಕಾವೇರಿ ನೀರು ಪೂರೈಕೆಯಾಗುತ್ತಿದೆ. ಮುಂದಿನ ತಿಂಗಳಿನಿಂದ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಸಿಗಲಿದ್ದು, ಒಟ್ಟು 2,225 ಎಂಎಲ್‌ಡಿ ಲಭ್ಯವಾಗಲಿದೆ. ಈಗಾಗಲೇ ನಗರಕ್ಕೆ ಮೀಸಲಿಟ್ಟಿರುವ 18 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಂಡಲ್ಲಿ ಮುಂದಿನ ಬೇಸಿಗೆವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರದು. ರಾಜ್ಯ ಸರ್ಕಾರ ಕಳೆದ ವರ್ಷ ಹೆಚ್ಚುವರಿಯಾಗಿ 6 ಟಿಎಂಸಿ ನೀರು ಬಳಸಿಕೊಳ್ಳಲು ಅನುಮತಿ ನೀಡಿರುವುದರಿಂದ ರಾಜಧಾನಿಗೆ ಒಟ್ಟು 24 ಟಿಎಂಸಿ ಕಾವೇರಿ ನೀರನ್ನು ಮೀಸಲಿಟ್ಟಂತಾಗಿದೆ.

ಆ.20ರ ಬಳಿಕ 110 ಹಳ್ಳಿಗೆ ಕಾವೇರಿ:

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಸರ್ಕಾರದ ವಾಗ್ದಾನ ಮುಂದಿನ ತಿಂಗಳು ಸಾಕಾರವಾಗಲಿದೆ. ಹಿಂದಿನ ವರ್ಷವೇ ನೀರು ಸರಬರಾಜಿಗೆ ಗಡುವು ಇದ್ದರೂ, ಕಾವೇರಿ 5ನೇ ಹಂತದ ಕಾಮಗಾರಿ ವಿಳಂಬದಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿರಲಿಲ್ಲ. ಈಗ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಆ.20ರ ಬಳಿಕ ಅಧಿಕೃತವಾಗಿ ಪೂರೈಕೆ ಮಾಡುವುದಾಗಿ ಡಿಸಿಎಂ ಹಾಗೂ ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಕೊಯ್ಲಿಗೆ ಆದ್ಯತೆ ನೀಡಿರಿ:

ಮಹಾನಗರದಲ್ಲಿ ವಾರ್ಷಿಕ 980 ಮಿ.ಮೀ.ಗೂ ಹೆಚ್ಚು ಮಳೆಯಾಗುತ್ತದೆ. ಒಂದು ಕೋಟಿ ಜನಸಂಖ್ಯೆ ಪೈಕಿ ಶೇ.25 ಮಂದಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಜತೆಗೆ ಬೋರ್‌ವೆಲ್‌ಗಳಿಗೂ ಮರುಪೂರಣ ಮಾಡಬೇಕಿದೆ. ಉದ್ಯಾನ ಸೇರಿ ಸರ್ಕಾರಿ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆಕೊಯ್ಲು ಕಡ್ಡಾಯ ಮಾಡಿದ್ದು ಇದರಿಂದ ಒಂದಿಷ್ಟು ರಿಲ್ೀ ದೊರೆತಂತಾಗಿದೆ. ದೊಡ್ಡ ವಿಸ್ತೀರ್ಣದ ಕಟ್ಟಡಗಳನ್ನು ಹೊಂದಿರುವವರು ಕಡ್ಡಾಯವಾಗಿ ಮಳೆಕೊಯ್ಲು ಅಳವಡಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.

ಕೆಆರ್‌ಎಸ್ ತುಂಬಿರುವ ಕಾರಣ ಸಹಜವಾಗಿಯೇ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಸರಾಗವಾಗಲಿದೆ. ಆದರೂ, ಶೇ.30-40 ಪ್ರಮಾಣದ ನೀರು ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿದೆ. ಮಳೆಕೊಯ್ಲು, ಜಲಮರುಪೂರಣಕ್ಕೆ ಜನರು ಆದ್ಯತೆ ನೀಡಿದರಷ್ಟೇ ನಗರ ಪೂರ್ಣವಾಗಿ ನೀರಿನ ಸಮಸ್ಯೆಯಿಂದ ಪರಾಗಬಹುದು.

- ಡಾ. ರಾಮ್‌ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ